ಬೆಂಗಳೂರು:ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ಬಗ್ಗೆ ಸಭೆಯಲ್ಲಿ ಡಿಜಿಪಿ ಅಲೋಕ್ ಮೋಹನ್ ಮತ್ತು ಪೊಲೀಸ್ ಕಮಿಷನರ್ ದಯಾನಂದ ಅವರು ಸಂಪೂರ್ಣ ವರದಿಯನ್ನು ಒಪ್ಪಿಸಲಿದ್ದಾರೆ. ಈ ಬಗ್ಗೆ ಸಿಸಿಟಿವಿ ದಾಖಲೆಗಳು, ಆರೋಪಿಯ ಚಲನವಲನ, ಸ್ಫೋಟದ ಉದ್ದೇಶ, ಭಯೋತ್ಪಾದಕರ ಕೃತ್ಯದ ಶಂಕೆ ಇತ್ಯಾದಿ ಅಂಶಗಳ ಮಾಹಿತಿಯನ್ನು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡೆಯಲಿದ್ದಾರೆ.