ಬೆಂಗಳೂರು:ಮಲ್ಟಿ ಆಕ್ಸಲ್ ವೋಲ್ವೊ ಕ್ಲಬ್ ಕ್ಲಾಸ್ ಮೂಲಕ ಐಷಾರಾಮಿ ಸಾರಿಗೆ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಮತ್ತಷ್ಟು ಹೈಟೆಕ್ ಸೇವೆಗೆ ಮುಂದಾಗಿದೆ. ವೋಲ್ವೋ ಕ್ಲಬ್ ಕ್ಲಾಸ್ 2.0 ಬಸ್ಗಳನ್ನು ರಸ್ತೆಗಿಳಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಬಸ್ಗಳ ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಐರಾವತ ಕ್ಲಬ್ ಬಸ್ಗಳಿಗೆ ವಿಧಾನಸೌಧದ ಮೆಟ್ಟಿಲುಗಳ ಎದುರು ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಆ ಮೂಲಕ ಐರಾವತ 2.0 ಮಾದರಿಯ 20 ಬಸ್ಗಳನ್ನು ಕೆಎಸ್ಆರ್ಟಿಸಿ ತನ್ನ ಸಮೂಹಕ್ಕೆ ಸೇರ್ಪಡೆಗೊಳಿಸಿದೆ. ಒಂದು ಬಸ್ನ ದರ 1.78 ಕೋಟಿ ರೂ.ಗಳಾಗಿದ್ದು, ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಗಳಿವೆ. ಅದಕ್ಕೆ ಇದೀಗ ಐರಾವತ 2.0 ಸೇರ್ಪಡೆಯಾಗಿವೆ.
ಐರಾವತ 2.0 ಗೆ ಸಿಎಂ ಚಾಲನೆ (ETV Bharat) ಬಸ್ಗೆ ಚಾಲನೆ ನೀಡಿದ ನಂತರ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಸ್ ಪರಿವೀಕ್ಷಣೆ ಮಾಡಿದರು. ಬಸ್ನ ಒಳಗೆ ಕುಳಿತು ವಾಹನದ ವಿಶೇಷತೆಗಳನ್ನು ಅವಲೋಕಿಸಿದರು. ಸಿಎಂಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದರು.
ಐರಾವತ 2.0 ಗೆ ಸಿಎಂ ಚಾಲನೆ (ETV Bharat) ಬಸ್ನ ವಿಶೇಷತೆಗಳು:ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಡೇ ರನ್ನಿಂಗ್ ಲೈಟ್ (DRL), ಫ್ಲಶ್ ಇಂಟೀರಿಯರ್ಸ್, ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ. ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಂತ್ರಜ್ಞಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ.
ಐರಾವತ 2.0 ಗೆ ಸಿಎಂ ಚಾಲನೆ (ETV Bharat) ಬಸ್ನ ಉದ್ದದಲ್ಲಿ ಶೇ 3.5 ಹೆಚ್ಚಿರುವುದರಿಂದ ಪ್ರಯಾಣಿಕರ ಆಸನಗಳ ನಡುವಿನ ಅಂತರವೂ ಹೆಚ್ಚಾಗಿದೆ. ಬಸ್ನ ಎತ್ತರದಲ್ಲಿ ಶೇ.5.6 ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್ ರೂಂ ಇರುತ್ತದೆ. ವಿಂಡ್‌ಶೀಲ್ಡ್ ಗಾಜು ಶೇ 9.5ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ, ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.
ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಿಂದಿನ ಬಸ್ಗಳಿಗೆ ಹೋಲಿಸಿದ್ದಲ್ಲಿ ಶೇ 20ರಷ್ಟು ಹೆಚ್ಚಿನ ಲಗೇಜ್ ಸೌಲಭ್ಯವಿದೆ. ಇದು ಲಗೇಜ್ಗೆ ಹೆಚ್ಚಿನ ಸ್ಥಳಾವಕಾಶವಿರುವ ಮೊದಲ ಬಸ್ ಆಗಿದೆ. USB + C ಟೈಪ್ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ವಿಶಾಲವಾದ ಎಸಿ ಡಕ್ಟ್ ಹೊಂದಿರುವುದರಿಂದ ವಾಹನದ ಒಳಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ ಇದೆ.
ಐರಾವತ 2.0 ಗೆ ಸಿಎಂ ಚಾಲನೆ (ETV Bharat) ಉನ್ನತ ದರ್ಜೆ/ವಿನ್ಯಾಸದ ಆಸನಗಳು ಮತ್ತು ಸಾಮಗ್ರಿಗಳ ಬಳಕೆಯಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಸೌಕರ್ಯ ಇದೆ. ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸದಿಂದ ವಾಹನದ ನಿರ್ವಹಣೆ ಕೈಗೊಳ್ಳಲು ಸುಲಭವಾಗಿರುತ್ತದೆ. ಹಿಂಭಾಗದಲ್ಲಿ fog light ಒಳಗೊಂಡಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ. ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದ್ದು, ಚಾಲಕರಿಗೆ ಹೆಚ್ಚು ಅನುಕೂಲಕರವಾಗಲಿದೆ.
ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಣೆ:ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ. ಬಸ್ನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್ಗಳಿದ್ದು, 30 ನಾಜ಼ಲ್ಗಳಿಂದ ನೀರು ಸರಬರಾಜಾಗಿ, ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ. ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು, ಹೆಚ್ಚಿನ ಸುರಕ್ಷತೆ ಇರುತ್ತದೆ.
ಐರಾವತ ಕ್ಲಬ್ ಕ್ಲಾಸ್ ವಾಹನಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
- ಶಿವಮೊಗ್ಗ - ಬೆಂಗಳೂರು-1
- ಬೆಂಗಳೂರು - ತಿರುಪತಿ-1
- ದಾವಣಗೆರೆ - ಬೆಂಗಳೂರು-1
- ಬೆಂಗಳೂರು - ಬಳ್ಳಾರಿ -1
- ಕುಂದಾಪುರ - ಬೆಂಗಳೂರು-2
- ಮಂಗಳೂರು - ಬೆಂಗಳೂರು-1
- ಬೆಂಗಳೂರು - ತಿರುಪತಿ-1
- ಮೈಸೂರು - ಬೆಂಗಳೂರು-1
- ಬೆಂಗಳೂರು - ಹೈದರಾಬಾದ್-1
- ಮೈಸೂರು - ಬೆಂಗಳೂರು-1
- ಬೆಂಗಳೂರು - ಚನ್ನೈ-1
- ಬೆಂಗಳೂರು - ರಾಯಚೂರು-2
- ಬೆಂಗಳೂರು - ಶ್ರೀ ಹರಿಕೋಟಾ-2
- ಬೆಂಗಳೂರು - ಕಾಸರಗೂಡು-2
- ಬೆಂಗಳೂರು - ಕ್ಯಾಲಿಕಟ್-2
ಓದಿ:ಜನನ-ಮರಣ ನೋಂದಣಿಗಾಗಿ ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಮ್ ಆ್ಯಪ್ ಬಿಡುಗಡೆಗೊಳಿಸಿದ ಕೇಂದ್ರ