ಮಂಗಳೂರು:ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಗಳಾದ ಶೆಲ್ಲೆ ಮತ್ತು ಪಂಚೆಯನ್ನು ತೊಟ್ಟು ತೆರಳಿದ ಕೈನಾಯಕರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿನಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಬಳಿಕ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರೆಡ್ ಕಾರ್ಪೆಟ್ ಹಾಕಿ, ವಾದ್ಯಘೋಷ, ಆನೆ, ಪದಾತಿ ಸಮ್ಮೇಳನದೊಂದಿಗೆ ವೈಭವದೊಂದಿಗೆ ದೇವಾಲಯದೊಳಗೆ ಸ್ವಾಗತಿಸಲಾಯಿತು. ಬಳಿಕ ದೇವರ ದರ್ಶನ ಪಡೆದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿ ಉತ್ತಮ ಮಳೆ - ಬೆಳೆ ಆಗಲೆಂದು ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಧರ್ಮದ ಸಂಪ್ರದಾಯದಂತೆ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಮಸ್ಕಾರ ಹೇಳಲು ಬಂದಿದ್ದೇವೆ. ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಶಕ್ತಿ ಯೋಜನೆ ಪ್ರಯೋಜನ ಪಡೆದು ಧರ್ಮಸ್ಥಳಕ್ಕೆ ಭಕ್ತರು ಬರುತ್ತಿದ್ದಾರೆಂದು ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ. ದೇವಸ್ಥಾನದೊಳಗೆ ಇದ್ದ ಮಹಿಳಾ ಭಕ್ತರು ತಮಗೆ ಎರಡು ಸಾವಿರ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ ಎಂದರು.