ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ಮುಗಿದು ಹೋಗಿರುವ ಅಧ್ಯಾಯ. 2028ರ ಚುನಾವಣೆ ಬಳಿಕ ಪರಿಸ್ಥಿತಿ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ. ಆದರೆ, ಅದು ಈಗಲ್ಲ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಎಲ್ಲರೂ ಈ ವಿಚಾರವಾಗಿ ಮಾತನಾಡಿದ್ದಾರೆ. ಅದು ಮುಗಿದು ಹೋಗಿದೆ. ಅದನ್ನೇ ಪುನರಾವರ್ತನೆ ಮಾಡುವುದರಲ್ಲಿ ಅವಶ್ಯಕತೆ ಇಲ್ಲ. ದೆಹಲಿ, ಬೆಂಗಳೂರಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಆದರೂ, ದಿನವೂ ಅದನ್ನೇ ಮುಂದುವರೆಸುವುದು ಅಗತ್ಯವಿಲ್ಲ. ಬೇರೆ-ಬೇರೆ ವಿಚಾರಗಳು ಇವೆ ಎಂದರು.
ವೈಯಕ್ತಿಕವಾಗಿ ಹೇಳಿದರೆ, ಮಹತ್ವ ಇಲ್ಲ: ಮುಂದುವರೆದು, ಸಿಎಂ ಬದಲಾವಣೆಯು ಮುಗಿದು ಹೋದ ಅಧ್ಯಾಯ. ಅದನ್ನು ರಸ್ತೆಯಲ್ಲಿ ಚರ್ಚೆ ಮಾಡಲು ಆಗಲ್ಲ. ಹೈಕಮಾಂಡ್ ಇದೆ, ಪಕ್ಷವಿದ್ದು, ಅದು ಅವರ ತೀರ್ಮಾನ. ಯಾರೋ, ಎಲ್ಲೋ ಮಾಡಲು ಆಗಲ್ಲ. ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷ ಇದೆ. ಅಲ್ಲಿಯೇ ಚರ್ಚೆ ಆಗಬೇಕು. ಅಲ್ಲಿಯೇ ತೀರ್ಮಾನವಾಗಬೇಕು. ಹೊರಗಡೆ ಯಾವುದೋ ಸಭೆ, ಸಮಾರಂಭಗಳಲ್ಲಿ, ನಾನು ವೈಯಕ್ತಿಕವಾಗಿ ಹೇಳಿದರೆ, ಅದಕ್ಕೆ ಮಹತ್ವ ಇಲ್ಲ ಎಂದು ವಿವರಿಸಿದರು.