ಬೆಂಗಳೂರು:ರಾಜ್ಯದಲ್ಲಿ ದಿನೇ ದಿನೆ ಹಣಕಾಸು ವಂಚನೆ ಪ್ರಕರಣಗಳು ಅಧಿಕವಾಗುತ್ತಿದ್ದು, ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಕೇಸ್ಗಳು ಬಹುತೇಕ ಸಿಐಡಿಗೆ ವರ್ಗಾವಣೆಯಾಗಿವೆ. ಹೀಗಾಗಿ, ಆರ್ಥಿಕ ಅಪರಾಧ ಪ್ರಕರಣಗಳ ತನಿಖೆಯಲ್ಲಿ ನೆರವಾಗಲು ಆರ್ಥಿಕ ತಜ್ಞ ಹಾಗೂ ಲೆಕ್ಕಪರಿಶೋಧಕರನ್ನು ನಿಯೋಜಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ನಿರ್ಧರಿಸಿದೆ.
ಪ್ರಕರಣಗಳ ತ್ವರಿತಗತಿ ತನಿಖೆಗೆ ಸಹಕಾರಿಯಾಗಬಲ್ಲ ನಾಲ್ವರನ್ನು ನೇಮಿಸಲು ಸಿಐಡಿ ಮುಂದಾಗಿದೆ. ಸಿಐಡಿಯ ಆರ್ಥಿಕ ಅಪರಾಧದಡಿ ಬರುವ ಹಣಕಾಸು ವಂಚನೆ, ಠೇವಣಿದಾರರ ವಂಚನೆ ತನಿಖೆ ಹಾಗೂ ಆರ್ಥಿಕ ಅಪರಾಧ ವಿಭಾಗಗಳಲ್ಲಿ ಈವರೆಗೂ ಸುಮಾರು 700 ಪ್ರಕರಣಗಳು ದಾಖಲಾಗಿವೆ.
ಹಣ ವರ್ಗಾವಣೆ ಜಾಲ ಬೇಧಿಸುವ ಗುರಿ: ಈ ಪೈಕಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದಯಡಿ (ಕೆಪಿಐಡಿಎಫ್ಇ) ಹಾಗೂ ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ-2019ರಡಿ 210 ಪ್ರಕರಣಗಳ ತನಿಖೆ ನಡೆಯುತ್ತಿದೆ. ಹಣಕಾಸು ವಂಚನೆಯಂತಹ ಪ್ರಕರಣಗಳಲ್ಲಿ ತನಿಖೆ ನಡೆಸುವುದು ಸವಾಲಾಗಿದೆ. ಬಿಟ್ ಕಾಯಿನ್ ಹಾಗೂ ಬ್ಯಾಂಕಿಂಗ್ ವಲಯಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರದಂತಹ ಪ್ರಕರಣಗಳಲ್ಲಿ ಸಿಐಡಿ ಪೊಲೀಸರಿಗೆ ಹಣದ ಮೂಲದ ವರ್ಗಾವಣೆ ಅರಿಯುವುದೇ ತ್ರಾಸದಾಯಕವಾಗಿದೆ. ಇದು ತನಿಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆರೋಪಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗಿಸಲು ಹಾಗೂ ತನಿಖೆ ಚುರುಕುಗೊಳಿಸಲು ನಾಲ್ವರನ್ನು ಗುತ್ತಿಗೆ ಆಧಾರದ ಮೇರೆಗೆ ನಿಯೋಜಿಸಿ, ಹಣದ ವರ್ಗಾವಣೆ ಜಾಲ ಬೇಧಿಸುವ ಗುರಿ ಸಿಐಡಿಯದ್ದು.
ರಾಜ್ಯದಲ್ಲಿ ಆರ್ಥಿಕ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಇತ್ತೀಚೆಗೆ ಗೋಕಾಕ್ ಮಹಾಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ 74.89 ಕೋಟಿ ವಂಚನೆ ಪ್ರಕರಣ ದಾಖಲಾಗಿರುವುದು ಇದಕ್ಕೆ ನಿದರ್ಶನ. ಆರೋಪಿಗಳ ವಿರುದ್ಧ ಕೆಪಿಐಡಿಎಫ್ಇ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಗೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಕೋರಿದ್ದಾರೆ.
ವಂಚನೆ ಅರಿಯಲು ಆಡಿಟ್ ವರದಿ: ಸಿಐಡಿಯಲ್ಲಿ ಇದುವರೆಗೂ ದಾಖಲಾದ ಸಾವಿರಾರು ಪ್ರಕರಣಗಳ ಪೈಕಿ ಆರ್ಥಿಕ ಅಪರಾಧ ಪ್ರಕರಣಗಳೇ ಸಿಂಹಪಾಲು ಪಡೆದಿವೆ. ಹೆಚ್ಚು ಲಾಭಾಂಶ ಅಥವಾ ಬಡ್ಡಿ ಆಸೆ ತೋರಿಸಿ ವಂಚನೆ, ಸಹಕಾರ ಬ್ಯಾಂಕ್ಗಳಿಂದ ಬಹುಕೋಟಿ ಹಗರಣ, ಮುಗ್ಧ ಜನರನ್ನು ನಂಬಿಸಿ ಮೋಸ ಮಾಡುವ ವಂಚನೆ ಪ್ರಕರಣಗಳೇ ಹೆಚ್ಚಾಗಿ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಕಂಪನಿಗಳು ಎಷ್ಟು ಹಣ ವಂಚಿಸಿವೆ ಎಂಬುದನ್ನು ಅರಿಯಲು ಆಡಿಟ್ ವರದಿ ಅಗತ್ಯವಾಗಿದೆ. ಆದರೆ, ಕೆಲ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕ ಪ್ರಕರಣಗಳಲ್ಲಿ ಆಡಿಟ್ ವರದಿ ತನಿಖಾಧಿಕಾರಿಗಳ ಕೈ ಸೇರದ ಪರಿಣಾಮ ತನಿಖೆಗೆ ಹಿನ್ನಡೆಯಾಗಿದೆ.