ಹುಬ್ಬಳ್ಳಿ:ಸಿಐಡಿ ಪೊಲೀಸರು ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖಾಧಿಕಾರಿಯಾದ ಸಿಐಡಿ ಡಿವೈಎಸ್ಪಿ ಎಂ.ಹೆಚ್.ಉಮೇಶ್, ಸುಮಾರು 494 ಪುಟಗಳ ದೋಷಾರೋಪಣೆ ಪಟ್ಟಿಯನ್ನು 3ನೇ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್ ಕೋರ್ಟ್ಗೆ ಸಲ್ಲಿಸಿದ್ದಾರೆ.
ಆರೋಪಿ ಗಿರೀಶ ಅಲಿಯಾಸ್ ವಿಶ್ವನಾಥ ಎಸ್.ಸಾವಂತ ಮೇ.15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಅವರನ್ನು ಹತ್ಯೆಗೈದಿದ್ದ. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ ಸಿಐಡಿ ಸುಮಾರು 85 ಸಾಕ್ಷ್ಯಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಸೇರಿಸಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್ಎಲ್ ವರದಿ, ಮೊಬೈಲ್, ಹತ್ಯೆಗೆ ಬಳಸಿದ್ದ ಚಾಕು ಇತ್ಯಾದಿ ಸಾಕ್ಷ್ಯಗಳು ಅಡಕವಾಗಿವೆ ಎಂದು ತಿಳಿದು ಬಂದಿದೆ.
ಅಂಜಲಿ ಮೂರ್ನಾಲ್ಕು ಬಾರಿ ಮೈಸೂರಿಗೆ ಹೋಗಿ ಗಿರೀಶನನ್ನು ಭೇಟಿಯಾಗಿದ್ದಳು. ಏಪ್ರಿಲ್‌ನಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದಾದ ಬಳಿಕ ಗಿರೀಶನ ಮೊಬೈಲ್ ನಂಬರ್ ಅನ್ನು ಅಂಜಲಿ ಬ್ಲಾಕ್ ಮಾಡಿದ್ದರು. ಇದರಿಂದ ಕೋಪಗೊಂಡ ಗಿರೀಶ ಆಕೆಯನ್ನು ಹತ್ಯೆಗೈದಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.