ಮೈಸೂರು: "ಜಿಲ್ಲೆಯ ಸಾಲಿಗ್ರಾಮ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿತಾಣವಾದ ಚುಂಚನಕಟ್ಟೆ ಜಾಲಪಾತದಲ್ಲಿ ಮೈಸೂರು ಜಿಲ್ಲಾಡಳಿತ ವತಿಯಿಂದ ನ. 30 ಮತ್ತು ಡಿ.1ರ ವರೆಗೆ ಚುಂಚನಕಟ್ಟೆ ಜಲಪಾತೋತ್ಸವ ಆಯೋಜಿಸಲಾಗಿದೆ. ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ" ಎಂದು ಕೆ. ಆರ್ ನಗರದ ಶಾಸಕ ಡಿ. ರವಿಶಂಕರ್ ತಿಳಿಸಿದರು.
ಇಂದು ನಗರದ ಜಲದರ್ಶಿನಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಚುಂಚನಕಟ್ಟೆಯಲ್ಲಿ ಕಾವೇರಿ ತಾಯಿ 65 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಮನಮೋಹಕ ಜಲಪಾತ ಸೃಷ್ಟಿಸುತ್ತಾಳೆ. ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದ ಎಂಬ ಇತಿಹಾಸವಿದೆ. ಇಲ್ಲಿನ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ ಇಲ್ಲಿ ಜನವರಿಯಲ್ಲಿ ನಡೆಯುತ್ತದೆ" ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಜಲಪಾತೋತ್ಸವ ಜರುಗಲಿದ್ದು, ರಾಜ್ಯ ಹಣಕಾಸು ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 50 ಲಕ್ಷದ ಖರ್ಚಿನಲ್ಲಿ ನಡೆಯಲಿದೆ. ಅಂದಾಜು 20 ಸಾವಿರ ಜನರು ಸೇರಲಿದ್ದಾರೆ. ಜಲಪಾತೋತ್ಸವಕ್ಕೆ ಬರುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಸೌಲಭ್ಯ ಹಾಗೂ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗುವುದು. ಹಾಗೂ ಗುಂಡಿ ಮುಚ್ಚುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ" ಎಂದು ಹೇಳಿದರು.
ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು:ಜಲಪಾತೋತ್ಸಕ್ಕೆ ಹೆಚ್ಚಿನ ಮೆರಗು ನೀಡಲು ಎರಡು ದಿನಗಳ ಕಾಲ ವಿವಿಧ ಹೆಸರಾಂತ ಕಲಾವಿದರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ. ಶನಿವಾರ ಸಂಜೆ 6.30ಕ್ಕೆ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜಲಪಾತೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಸಂಜೆ 4.30ಕ್ಕೆ ಬಸವಯ್ಯ ಮತ್ತು ತಂಡದಿಂದ ಜನಪದ ಝೇಂಕಾರ, ಸಂಜೆ 5 ಗಂಟೆಗೆ ಡಾ.ಕಾ.ರಾಮೇಶ್ವರಪ್ಪ ತಂಡದಿಂದ ಕನ್ನಡ ಗೀತಗಳ ಡಿಂಡಿಮ, ರಾತ್ರಿ 7.30 ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.