ಪುತ್ತೂರು (ದಕ್ಷಿಣ ಕನ್ನಡ):ಆ. 19ಕ್ಕೆ ಮಂಗಳೂರಿನಲ್ಲಿ ಕೆಪಿಸಿಸಿಯ ನಿರ್ದೇಶನದಂತೆ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಪ್ರತಿಭಟನೆಯಲ್ಲಿ 'ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಕರ್ನಾಟಕದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶದ ಅಧ್ಯಕ್ಷರು ರಾತ್ರೋರಾತ್ರಿ ಓಡಿಹೋದ ಪರಿಸ್ಥಿತಿ ಗವರ್ನರ್ ಆಫೀಸ್ಗೆ ಬರುತ್ತದೆ...' ಎಂದು ಎಂಎಲ್ಸಿ ಐವನ್ ಡಿಸೋಜ ಅವರು ಭಾಷಣದಲ್ಲಿ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಹೇಳಿಕೆಯನ್ನು ತಿರುಚಿ ಅವರ ಮಾನಹಾನಿಗೆ ಪ್ರಯತ್ನಿಸಿ, ಅವರ ಅನುಪಸ್ಥಿತಿಯಲ್ಲಿ ಅವರ ಮನೆಗೆ ರಾತ್ರಿ ಕಲ್ಲುತೂರಾಡಿ ರಾಜಕೀಯ ಹಿಂಸಾರಕ್ಕೆ ಯತ್ನಿಸಿದ ದ. ಕ ಜಿಲ್ಲಾ ಬಿಜೆಪಿಯ ಗೂಂಡಾ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ತೀವ್ರವಾಗಿ ಖಂಡಿಸುತ್ತದೆ ಎಂದರು.
ಐವನ್ ಡಿಸೋಜ ಅವರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯರಾಗಿ ಜಾತ್ಯತೀತತೆ ಸಮುದಾಯದ ಧ್ವನಿಯನ್ನು ವಿಧಾನಪರಿಷತ್‌ನಲ್ಲಿ ಎತ್ತುತ್ತಿದ್ದಾರೆ. ಇಂತಹ ಜನಪ್ರತಿನಿಧಿಯನ್ನು ವಿನಾ ಕಾರಣ ನಿಂದಿಸಿ ರಾತ್ರಿ ಹೊತ್ತು ಕಲ್ಲುತೂರಾಟ ನಡೆಸಿರುವುದು ಭಯೋತ್ಪಾದನೆಗೆ ಸಮಾನವಾದ ಕೃತ್ಯವಾಗಿದೆ ಎಂದು ಕಿಡಿಕಾರಿದರು.
ಅವರು ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡರೆ ಜನರ ಆಕ್ರೋಶವನ್ನು ಎದುರಿಸಬೇಕಾದಿತು ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದರು. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಸ್ಟೇಷನ್‌ಗೆ ನುಗ್ಗಿ ಅಲ್ಲಿರುವ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿದರು.