ಚಿಕ್ಕಮಗಳೂರು: ವಿದ್ಯುತ್ ಇಲ್ಲದೇ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುವಂತಹ ಪರಿಸ್ಥಿತಿಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದು ಸಾಕ್ಷಿಯಾಗಿದೆ. ಎನ್.ಆರ್.ಪುರ ಪಟ್ಟಣದ ಕೈಮರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ಶಾಲೆಯ ಪರಿಸ್ಥಿತಿ ಇದು. ವಿದ್ಯುತ್ ಇಲ್ಲದೇ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಪ್ರತಿಕ್ರಿಯೆ ಮುಂದಿನ ತಿಂಗಳಿನಿಂದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ನಡೆಯಲಿದೆ. ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಲ್ಲಿ ವಿದ್ಯುತ್ ಕಡಿತ ಮಾಡುತ್ತಿದ್ದರೆ ಮಕ್ಕಳು ಹೇಗೆ ಓದುತ್ತಾರೆ ಎಂಬ ಆತಂಕ ಪೋಷಕರದ್ದು. ಮಕ್ಕಳು ಸಂಜೆ ವೇಳೆ ಶಾಲಾ ಕಟ್ಟಡದಿಂದ ಹೊರಬಂದು ಕಾಂಪೌಂಡ್ ಒಳಗೆ ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಾರೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆಯೂ ಮೂಡಿದೆ.
ಅದಲ್ಲದೇ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕ ಟಿ.ಡಿ.ರಾಜೇಗೌಡ ಅವರ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಈ ಎನ್.ಆರ್.ಪುರ ತಾಲೂಕು ಸೇರಲಿದೆ.
65ಕ್ಕೂ ಹೆಚ್ಚು ಹೆಣ್ಣು ಮಕ್ಕಳಿರುವ ವಸತಿ ಶಾಲೆಗೆ ಸರ್ಕಾರ ಕೂಡಲೇ ಯುಪಿಎಸ್ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶಾಲೆಯಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಈಗಾಗಲೇ ಈ ಸಮಸ್ಯೆ ಬಗೆಹರಿಸುವಂತೆ ವಸತಿ ನಿಲಯದ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡಿ, "ಎನ್ ಆರ್. ಪುರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹೊಸದಾಗಿ ನಿರ್ಮಾಣಗೊಂಡಿದೆ. ಆ ವಿದ್ಯಾರ್ಥಿನಿಯರ ನಿಲಯಕ್ಕೆ ಸದ್ಯಕ್ಕೆ ರೂರಲ್ ಎಲೆಕ್ಟ್ರಿಕ್ ಲೈನ್ ಕನೆಕ್ಷನ್ ಸಿಕ್ಕಿದೆ. ಅರ್ಬನ್ ಲೈನ್ ನೀಡುವಂತೆ ಈಗಾಗಲೇ ಹಲವಾರು ಕೆಡಿಪಿ ಸಭೆಗಳಲ್ಲಿ ಕೇಳಿಕೊಂಡಿದ್ದೇವೆ. ಅದರ ವಿಚಾರವಾಗಿ ಅವರು ಟೆಂಡರ್ ಅನ್ನು ಕರೆದಿದ್ದಾರೆ. ಒಂದು ತಿಂಗಳೊಳಗೆ ಫೈನಲ್ ಮಾಡಿ ನಮಗೆ ಅರ್ಬನ್ ಲೈನ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದು ಸಿಕ್ಕಿದರೆ ನಮಗೆ 24/7 ವಿದ್ಯುತ್ ಸಪ್ಲೈ ಸಿಗಲಿದೆ. ಈಗ ಇರುವ ಲೈನ್ ಬದಲಾಯಿಸಿ, ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಅಳವಡಿಸಬೇಕಾಗಿದೆ. ವಿದ್ಯಾರ್ಥಿನಿಯರ ನಿಲಯಕ್ಕೆ ಯುಪಿಎಸ್ ಬ್ಯಾಟರಿ ನೀಡಿದ್ದೇವೆ. 4- 5 ಗಂಟೆ ಅದರಲ್ಲಿ ಬ್ಯಾಕಪ್ ಇರುತ್ತದೆ. ಮೊನ್ನೆ ಇಡೀ ದಿನ ಸುಮಾರು 9 ಗಂಟೆ ವಿದ್ಯುತ್ ಇಲ್ಲದ ಕಾರಣ, ಯುಪಿಎಸ್ ಬ್ಯಾಟರಿ ಕೂಡ ಚಾರ್ಜ್ ಆಗಿರಲಿಲ್ಲ. ಹಾಗಾಗಿ ಅರ್ಧ ಗಂಟೆ ವಿದ್ಯುತ್ ಇಲ್ಲದೇ ವಿದ್ಯಾರ್ಥಿನಿಯರು ಬೀದಿ ದೀಪದ ಕೆಳಗೆ ಕುಳಿತಿದ್ದರು. ಆಮೇಲೆ ವಿದ್ಯುತ್ ಬಂದು, ಬ್ಯಾಟರಿ ಚಾರ್ಜ್ ಮಾಡಲಾಗಿದೆ" ಎಂದು ಸ್ಪಷ್ಟನೆ ಕೂಡಾ ನೀಡಿದ್ದಾರೆ.
ಇದನ್ನೂ ಓದಿ:ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ಬರೆದ 5ನೇ ತರಗತಿ ಮಕ್ಕಳು