ಬಿಜೆಪಿ ನಾಯಕ ಡಾ. ಕೆ.ಸುಧಾಕರ್ ಹೇಳಿಕೆ ಬೆಂಗಳೂರು:ಮೋದಿಗಾಗಿ ಡಾ. ಕೆ. ಸುಧಾಕರ್ ಮೇಲಿನ ಮುನಿಸು ಮರೆತು ಒಂದಾಗಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಲ್ಲವನ್ನು ಹೇಳಲಾಗಿದ್ದು, ಅವರಿಗೆ ಎಲ್ಲವೂ ಗೊತ್ತಿದೆ. ಮೋದಿಗಾಗಿ ಕೆಲಸ ಮಾಡಿ ಎಂದಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ ಲೀಡ್ ಕೊಡಿಸುವ ಜವಾಬ್ದಾರಿ ನನ್ನದು ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್ ಪ್ರಯತ್ನಿಸಿದರು. ಅಂತಿಮವಾಗಿ ಡಾ. ಕೆ. ಸುಧಾಕರ್ ಅವರಿಗೆ ಟಿಕೆಟ್ ಲಭಿಸಿದೆ. ಇದು ಸಹಜವಾಗಿ ಎಸ್.ಆರ್. ವಿಶ್ವನಾಥ್ ಆವರ ಮುನಿಸಿಗೆ ಕಾರಣವಾಗಿತ್ತು. ಇದೇ ಮುನಿಸು ಇಬ್ಬರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚು ಮಾಡಿತು. ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು ಇಬ್ಬರ ಮುನಿಸಿಗೆ ಅಂತ್ಯ ಹಾಡಿದ್ದಾರೆ. ಇಂದು ಶಾಸಕ ಎಸ್.ಆರ್. ವಿಶ್ವನಾಥ್ ಮನೆಗೆ ಭೇಟಿ ನೀಡಿದ ಡಾ. ಕೆ. ಸುಧಾಕರ್ ಉಪಹಾರ ಮಾಡುವ ಮೂಲಕ ಮುನಿಸು ಮರೆತು ಒಂದಾಗಿದ್ದಾರೆ.
ಸುಧಾಕರ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಆರ್. ವಿಶ್ವನಾಥ್, ಪಕ್ಷದ ಮೇಲೆ ನಾವು ಯಾವತ್ತು ಅಸಮಾಧಾನ ವ್ಯಕ್ತಪಡಿಸಿಲ್ಲ. ಅಭ್ಯರ್ಥಿಯಾದ ಸುಧಾಕರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೇವೆ. ನಿನ್ನೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆ. ನಾನು ಎಲ್ಲವನ್ನು ಅಮಿತ್ ಶಾ ಅವರ ಮುಂದೆ ಹೇಳಿದ್ದೇನೆ. ನನಗೆ ಎಲ್ಲವೂ ಗೊತ್ತು.. ನರೇಂದ್ರ ಮೋದಿಗಾಗಿ ಕೆಲಸ ಮಾಡಿ ಎಂದು ಹೇಳಿರುವುದಾಗಿ ತಿಳಿಸಿದರು.
ನರೇಂದ್ರ ಮೋದಿ ಮತ್ತು ಪಕ್ಷಕ್ಕಾಗಿ ಒಂದಾಗಿದ್ದೇವೆ. ಯಲಹಂಕ ಕ್ಷೇತ್ರದಲ್ಲಿ ನಾವು ಬಹುಮತವನ್ನು ಕೊಟ್ಟೇ ಕೊಡುತ್ತೇವೆ. ಏಪ್ರಿಲ್ 7 ರಂದು ಕೇಸರಿ ವನದಲ್ಲಿ ಕಾರ್ಯಕರ್ತರ ಸಭೆಯನ್ನ ಕರೆಯಲಾಗಿದ್ದು, ಅಭ್ಯರ್ಥಿಯಾದ ಡಾ. ಕೆ.ಸುಧಾಕರ್ ಅವರು ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ ಎಂದರು. ಈ ವೇಳೆ ಡಾ.ಕೆ.ಸುಧಾಕರ್ ಜೊತೆಯಲ್ಲಿ ಶಾಸಕ ಮುನಿರಾಜು, ಮಾಜಿ ಶಾಸಕರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಪಿಳ್ಳಮುನಿಶ್ಯಾಮಪ್ಪ ಇದ್ದರು.
ವಿಶ್ವನಾಥ್ ನನಗೆ ಮೊದಲಿನಿಂದಲೂ ಸ್ನೇಹಿತರು: ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿನ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿದ ಡಾ. ಕೆ.ಸುಧಾಕರ್ ಅನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಎಸ್.ಆರ್.ವಿಶ್ವನಾಥ್ ಅವರು ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರು. ನನಗೆ ಮೊದಲಿನಿಂದಲೂ ಸ್ನೇಹಿತರು. ಕರ್ನಾಟಕ ಚುನಾವಣಾ ಉಸ್ತುವಾರಿಗಳಾದ ರಾಧಮೋಹನ್ ದಾಸ್ ಅಗರ್ವಾಲ್ ಅವರ ಜೊತೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದೆವು. ಇವತ್ತು ಉಪಹಾರಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದ್ರು. ನಮ್ಮ ಜೊತೆಯಲ್ಲಿ ಶಾಸಕರಾದ ಮುನಿರಾಜು, ಮಾಜಿ ಶಾಸಕರಾದ ಪಿಳ್ಳಮುನಿಶ್ಯಾಮಣ್ಣ, ಕಟ್ಟಾ ಸುಬ್ರಮಣ್ಯ ನಾಯ್ದು ಬಂದಿದ್ದರು ಎಂದು ಹೇಳಿದರು.
ಬಹಳ ಒಳ್ಳೆಯ ಅತಿಥ್ಯವನ್ನ ನೀಡಿದ್ದಾರೆ. ನಾನು ಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತಿದ್ದೇನೋ ಹಾಗೆಯೇ ನಿಮ್ಮ ಪರವಾಗಿ ಕೆಲಸ ಮಾಡುವೆ. ಯಲಹಂಕ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡಿ ಅತಿ ಹೆಚ್ಚು ಲೀಡ್ ಕೊಡಿಸುವುದಾಗಿ ನನಗೆ ಭರವಸೆ ನೀಡಿದ್ದಾರೆ. ನಾನು ಸಹ ಅವರ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಅವರ ಕಾರ್ಯಕರ್ತರನ್ನ ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ನಡೆಸಿಕೊಳ್ಳುವ ಪ್ರಾಮಾಣಿಕ ಭರವಸೆ ಕೊಡುತ್ತೇನೆ. ನಾಳೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ನಾಮಪತ್ರ ಸಲ್ಲಿಸಲು ಬರುವಂತೆ ಆಹ್ವಾನ ನೀಡಿದ್ದೇನೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ ಎಂದರು.
ಓದಿ:ಬಿಜೆಪಿ ಸೇರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಘೋಷಣೆ - MP Sumalatha