ಬೆಳಗಾವಿ: ಬೆಳಗಾವಿಯಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಲಾಖೆ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದು, ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಒಂದು ಚಿಕ್ಕದಾದ ಕೋಣೆಯಲ್ಲಿ ಕುಳಿತು ಇಡೀ ತೆರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟ ದೇಶದಲ್ಲೆ ಮೊದಲ ವಂಚನೆ ಪ್ರಕರಣ ಇದಾಗಿದೆ. ಅಧಿಕಾರಿಗಳು ಆರೋಪಿಯ ಬುದ್ಧಿವಂತಿಕೆ ಕಂಡು ದಂಗಾಗಿದ್ದಾರೆ. ಆರೋಪಿ, ತೆರಿಗೆ ಸಲಹೆಗಾರ ನಕೀಬ್ ಮುಲ್ಲಾ ಕೋಟ್ಯಂತರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡಿದ್ದಲ್ಲದೇ 132 ಕೋಟಿ ನಕಲಿ ಬಿಲ್(ಇನ್ ವೈಸ್) ಸೃಷ್ಟಿಸಿ 23.8 ಕೋಟಿ ರೂ. ಐಟಿಸಿ ತೆರಿಗೆ ಹಣವನ್ನು ವಂಚಿಸಿದ್ದಾನೆ.
24 ವರ್ಷದ ಅತೀ ಚಾಣಾಕ್ಷ ತೆರಿಗೆ ಸಲಹೆಗಾರನಾಗಿರುವ ಆರೋಪಿ ನಕೀಬ್ ಮುಲ್ಲಾ, ಗ್ರಾಹಕರಿಂದ ತೆರಿಗೆ ಹಣ ಪಡೆದು ಅದನ್ನು ಸರ್ಕಾರಕ್ಕೆ ತುಂಬದೇ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂಬ ಆರೋಪ ಇದೆ. ಅಲ್ಲದೇ ನೂರಾರು ಕಂಪನಿಗಳಿಗೆ ತನ್ನ ಒಂದೇ ಇಮೇಲ್ ಐಡಿಯಿಂದ ವ್ಯವಹರಿಸಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹೀಗೆ ಮೂರು ರಾಜ್ಯಗಳಲ್ಲಿ ಆತ ವ್ಯವಹಾರ ಮಾಡಿದ್ದು, ಎರಡ್ಮೂರು ತಿಂಗಳು ಆರೋಪಿಯ ಬೆನ್ನು ಬಿದ್ದ ಜಿಎಸ್ಟಿ ಅಧಿಕಾರಿಗಳು ಕೊನೆಗೂ ಆತನಿಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೆಲ್ಲಾ ವಂಚನೆ ಮಾಡಿದ್ದು, ಕೇವಲ 3 ತಿಂಗಳಲ್ಲಿ ಮತ್ತು ಏಕಾಂಗಿಯಾಗಿ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.