ಕರ್ನಾಟಕ

karnataka

ETV Bharat / state

ಚನ್ನಪಟ್ಟಣ ಉಪಚುನಾವಣೆ: ಡಿಕೆ ಸುರೇಶ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಚಂಡಿಕಾಯಾಗ - DK SURESH

ಡಿ ಕೆ ಸುರೇಶ್​ ಅವರಿಗಾಗಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಚಂಡಿಕಾಯಾಗ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊಲ್ಲೂರು ಮೂಕಾಂಬಿಕೆ ದೇವಾಯದಲ್ಲಿ ಚಂಡಿಕಾಯಾಗ ಮಾಡಿಸಿದ ಮಾಜಿ ಶಾಸಕ ಎಂ.ಸಿ ಅಶ್ವಥ್
ಕೊಲ್ಲೂರು ಮೂಕಾಂಬಿಕೆ ದೇವಾಯದಲ್ಲಿ ಚಂಡಿಕಾಯಾಗ ಮಾಡಿಸಿದ ಮಾಜಿ ಶಾಸಕ ಎಂ.ಸಿ ಅಶ್ವಥ್ (ETV Bharat)

By ETV Bharat Karnataka Team

Published : Oct 17, 2024, 6:12 PM IST

ಉಡುಪಿ:ಚನ್ನಪಟ್ಟಣ ಉಪಚುನಾವಣೆಗೆ ಡಿಕೆ ಸುರೇಶ್​ ಅವರಿಗೆ ಟಿಕೆಟ್ ಸಿಗಬೇಕು ಮತ್ತು ಭರ್ಜರಿ ಜಯ ಸಾಧಿಸಬೇಕೆಂದು ಚನ್ನಪಟ್ಟಣ ಮಾಜಿ ಶಾಸಕ ಎಂಸಿ ಅಶ್ವಥ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ,ಸರ್ವ ಸೇವಾಲಂಕಾರ ಮತ್ತು ವಿಶೇಷ ಪೂಜಾ ಸೇವೆಯನ್ನು ನೆರವೇರಿಸಿದರು.

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಚುನಾವಣೆಯು ಹೆಚ್.​​ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಉಪಚುನಾವಣಾ ಕಣಕ್ಕೆ ಇಳಿಯಬೇಕೆಂದು ಹಲವರು ಒತ್ತಾಯಿಸಿದ್ದಾರೆ.

ಡಿಕೆ ಸುರೇಶ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಚಂಡಿಕಾಯಾಗ (ETV Bharat)

ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ಡಿ.ಕೆ.ಸುರೇಶ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾಯಾಗ ನೆರವೇರಿಸಿದರು. ಇದೇ ವೇಳೆ ಡಿಕೆ ಸುರೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕೆಂದು ಪ್ರಾರ್ಥಿಸಿದರು. ಈ ವೇಳೆ ಡಿಕೆ ಸುರೇಶ್ ಅಭಿಮಾನಿಗಳು, ಕಾಂಗ್ರೆಸ್ ಬೆಂಬಲಿಗರು ಕೂಡ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

ಇನ್ನು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಸಿ.ಅಶ್ವಥ್, ಡಿಕೆ ಸುರೇಶ್ ಅವರಿಗೆ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಸಿಗಬೇಕು ಮತ್ತು ಜಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಹಾಗೆಯೇ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಶಕ್ತಿಗಾಗಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಕೊಲ್ಲೂರು ಮೂಕಾಂಬಿಕೆ ದೇವಾಯದಲ್ಲಿ ಚಂಡಿಕಾಯಾಗ ಮಾಡಿಸಿದ ಮಾಜಿ ಶಾಸಕ ಎಂ.ಸಿ ಅಶ್ವಥ್ (ETV Bharat)

ಕಾಂಗ್ರೆಸ್ ಪಕ್ಷದಿಂದ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಫೈನಲ್ ಆಗಿಲ್ಲ. ಈ ನಡುವೆ ಡಿಕೆ ಸುರೇಶ್ ಗೆಲುವಿಗಾಗಿ ಯಾಗ ಮಾಡಿಸುತ್ತಿರುವ ಎಂ.ಸಿ.ಅಶ್ವಥ್ ನಡೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನವೆಂಬರ್ 13 ರಂದು ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭೆ ಉಪಚುನಾವಣೆಯ ಮತದಾನ ನಡೆಯಲಿದ್ದು, ನ.23 ರಂದು ಫಲಿತಾಂಶ ಪ್ರಕಟವಾಗಲಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ಪ್ರಚಾರಕ್ಕೆ ತಯಾರಿ ನಡೆಸಿವೆ. ಇನ್ನು ಹೆಚ್ ಡಿ ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್​ಡಿಎ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ರಾಜ್ಯದ ಮೂರು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿ! ಆಯಾ ಕ್ಷೇತ್ರದ ಮತದಾರರ ಮಾಹಿತಿ ಹೀಗಿದೆ

ABOUT THE AUTHOR

...view details