ಕರ್ನಾಟಕ

karnataka

ETV Bharat / state

ಚನ್ನಪಟ್ಟಣ - ರಾಮನಗರ ಅಭಿವೃದ್ಧಿ, 10 ಸಾವಿರ ಜನರಿಗೆ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆ: ಹೆಚ್​.ಡಿ.ಕೆ - H D KUMARASWAMY

ಚನ್ನಪಟ್ಟಣ ಹಾಗೂ ರಾಮನಗರ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ
ಹೆಚ್​.ಡಿ. ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Nov 2, 2024, 6:23 PM IST

ರಾಮನಗರ: "ಹುಬ್ಬಳ್ಳಿ - ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ಎರಡು ಪಟ್ಟಣಗಳ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ವಿರೂಪಸಂದ್ರ ಗ್ರಾಮದಲ್ಲಿ ಪ್ರಚಾರ ನಡೆಸಿ ಬಳಿಕ ಮಾತನಾಡಿದ ಅವರು, "ಚನ್ನಪಟ್ಟಣ ಹಾಗೂ ರಾಮನಗರಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು. ಈವರೆಗೂ ನಾನು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ತಾಲೂಕಿನ ಜನರ ಔದಾರ್ಯ ಹಾಗೂ ಮಂಡ್ಯ ಜನರ ಆಶೀರ್ವಾದ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ನಂಬಿಕೆಯಿಂದ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಸಿಕ್ಕಿರುವ ಈ ಅವಕಾಶ ಸದ್ಬಳಕೆ ಮಾಡಿಕೊಂಡು ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜಿಲ್ಲೆಗೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತೇನೆ" ಎಂದರು.

ಕುಮಾರಸ್ವಾಮಿ, ನಿಖಿಲ್​ ಕುಮಾರಸ್ವಾಮಿ ಪ್ರತಿಕ್ರಿಯೆ (ETV Bharat)

"ಈ ಭಾಗದ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ದೊರಕಿಸುವ ಕೆಲಸ ಮಾಡುತ್ತೇವೆ. ಅಲ್ಲದೆ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಆರ್ಥಿಕತೆಗೆ ಶಕ್ತಿ ಬಂದು ಈ ಭಾಗದ ಜನಜೀವನ ಸುಧಾರಿಸುತ್ತದೆ. 2018ರಲ್ಲಿ ಕಾರ್ಯಕರ್ತರು ಒತ್ತಡ ಹಾಕಿ ನನ್ನನ್ನು ಚನ್ನಪಟ್ಟಣಕ್ಕೆ ಕರೆತಂದರು. ಬಳಿಕ ಎರಡು ಬಾರಿಯೂ ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಇಗ್ಗಲೂರು ಬಳಿ ಜಲಾಶಯ ಕಟ್ಟಿಸಿದರು. ಹಲವು ಪಕ್ಷಗಳಿಗೆ ಹೋಗಿ ಈಗ ಕಾಂಗ್ರೆಸ್ ಸೇರಿರುವ ಕಾಂಗ್ರೆಸ್ ಅಭ್ಯರ್ಥಿ, ತಾಲೂಕಿಗೆ ನೀರಾವರಿ ಕೊಟ್ಟಿದ್ದು ನಾನೇ ಎನ್ನುತ್ತಿದ್ದಾರೆ. ದೇವೇಗೌಡರು ಡ್ಯಾಂ ಕಟ್ಟಿಸಿರಲಿಲ್ಲ ಎಂದರೆ ಇವರು ಕೆರೆಗಳನ್ನು ಹೇಗೆ ನೀರು ತುಂಬಿಸುತ್ತಿದ್ದರು" ಎಂದು ಪ್ರಶ್ನಿಸಿದರು.

ನಿಖಿಲ್ ಕುಮಾರಸ್ವಾಮಿ ಪ್ರಚಾರ:ಮತ್ತೊಂದೆಡೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ವಿರುಪಾಕ್ಷಿಪುರ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದೀಪಾವಳಿ ಹಬ್ಬ ಇದ್ದರೂ ಸಹ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಈ ಬಾರಿ ಜನ ನನಗೆ ಬೆಂಬಲ ನೀಡುವ ವಿಶ್ವಾಸ ಇದೆ" ಎಂದು ತಿಳಿಸಿದರು.

ಉದ್ದೇಶಪೂರ್ವಕವಾಗಿ ಕಣ್ಣೀರು ಹಾಕಿಲ್ಲ:"ತಮ್ಮ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗ್ಯದ ವಿಚಾರವಾಗಿ ಮಾತನಾಡಿ, ರಾಮನಗರ ಜಿಲ್ಲೆಯ ಜನರ ಜೊತೆ ಅವಿನಾಭಾವ ಸಂಬಂಧ ಇದೆ. ನಾವು ಮಾಡಿರೋ ಅಭಿವೃದ್ಧಿ ಕೆಲಸವನ್ನು ಜನರಿಗೆ ಮನವರಿಕೆ ಮಾಡಿ ಮತ ಕೇಳುತ್ತಿದ್ದೇವೆ. ನಾನು ಉದ್ದೇಶ ಪೂರ್ವಕವಾಗಿ ಮತಗಿಟ್ಟಿಸಲು ಕಣ್ಣೀರು ಹಾಕಿಲ್ಲ. ನನ್ನ ನೋವನ್ನು ಜನರ ಬಳಿ ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದೇನೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಚನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಗೆ ಚುನಾವಣೆ ಬಂದ್ರೆ ಅಳು ಬರುತ್ತದೆ: ಡಿ ಕೆ ಶಿವಕುಮಾರ್

ABOUT THE AUTHOR

...view details