ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಟಿಕೆಟ್ ವಿಚಾರದಲ್ಲಿನ ಗೊಂದಲ ಮುಂದುವರೆದಿರುವ ನಡುವೆಯೇ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಸಭಾಪತಿಯ ಭೇಟಿಗೆ ತೆರಳಿದ್ದಾರೆ. ಸಂಜೆ ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಟಿಕೆಟ್ ಬಗ್ಗೆ ಖಚಿತತೆ ಸಿಗದ ಹಿನ್ನೆಲೆಯಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ, ಯಾವ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸುತ್ತಾರಾ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಈ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, "ನನಗೂ ಯೋಗೇಶ್ವರ್ ನಡೆ ಅಚ್ಚರಿ ಮೂಡಿಸಿತು. ನಾವು ಯೋಗೇಶ್ವರ್‌ರನ್ನು ಕರೆದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದೆವು. ದುಡಕುಬೇಡಿ, ಒಳ್ಳೆಯದಾಗುತ್ತದೆ ಎಂದು ಹೇಳಿದ್ದೆವು. ಆಮೇಲೆ ಒಪ್ಪಿ ಹೋದವರು ರಾಜೀನಾಮೆ ಕೊಡೋಕಂತ ಹೋಗ್ತಿದ್ದಾರೆ. ಇನ್ನೂ ಅವರ ಸ್ಪರ್ಧೆ ಬಗ್ಗೆ ಪಕ್ಷದಲ್ಲೇ ಚರ್ಚೆ ನಡೆಯುತ್ತಿದೆ. ಅವರನ್ನು ಅಭ್ಯರ್ಥಿ ಮಾಡಬೇಕೆಂದೂ ಮಾತುಕತೆ ಮಾಡ್ತಿದ್ದೇವೆ" ಎಂದರು.
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯ ತೀರ್ಮಾನ ಕುಮಾರಸ್ವಾಮಿಯವರದ್ದೇ. ಅದನ್ನು ಯೋಗೇಶ್ವರ್ಗೂ ಮನದಟ್ಟು ಮಾಡಿದ್ದೆವು. ಅಶ್ವತ್ಥನಾರಾಯಣ್ ಕೂಡ ಸಿಪಿವೈ ಜೊತೆ ಮಾತಾಡ್ತಿದ್ದಾರೆ. ಯೋಗೇಶ್ವರ್ ದುಡುಕ್ತಾರೆ ಅಂತಾ ನಾವು ಭಾವಿಸುವುದಿಲ್ಲ. ಇನ್ನೂ ನಾಲ್ಕು ದಿನಗಳಿವೆ. ನಾನು ಕುಮಾರಸ್ವಾಮಿ ಜೊತೆ ಮಾತಾಡ್ತೀನಿ. ಜೆಡಿಎಸ್ ಆದರೂ ಆಗಬಹುದು, ಬಿಜೆಪಿ ಚಿಹ್ನೆಯಿಂದಲಾದರೂ ಆಗಬಹುದು, ಅವರನ್ನೇ ಕಣಕ್ಕಿಳಿಸುವ ಬಗ್ಗೆ ಇನ್ನೂ ಮಾತುಕತೆ ನಡೀತಿದೆ. ಈಗಾಗಲೇ ಕುಮಾರಸ್ವಾಮಿಯವರು ಬಹಿರಂಗವಾಗಿಯೇ ಹೇಳಿದ್ದಾರೆ. ನನಗಿರುವ ಮಾಹಿತಿ ಪ್ರಕಾರ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ. ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು, ಇದನ್ನು ನಾನೂ ಕೂಡ ಕುಮಾರಸ್ವಾಮಿಯವರಿಗೆ ಹೇಳಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ:ನಿಖಿಲ್ಗೆ ಟಿಕೆಟ್ ಕೊಡೋದಿದ್ದರೆ ಕೊಡಲಿ, ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂದು ಆರೋಪಿಸುವುದು ಬೇಡ : HDKಗೆ ಯೋಗೇಶ್ವರ್ ತಿರುಗೇಟು