ಕರ್ನಾಟಕ

karnataka

ETV Bharat / state

ಚನ್ನಪಟ್ಟಣ ಟಿಕೆಟ್ ಬಿಕ್ಕಟ್ಟು: ಇಂದು ಜೆಡಿಎಸ್​ ಸಭೆ, ಅಭ್ಯರ್ಥಿ ಆಯ್ಕೆ ಸಾಧ್ಯತೆ - CHANNAPATNA

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಎನ್​ಡಿಎ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಪರಿಷತ್ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಇತ್ತ ಜೆಡಿಎಸ್ ನಾಯಕರು ದೇವೇಗೌಡರ ಜೊತೆ ಸಭೆ ನಡೆಸಿದರು.

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Oct 21, 2024, 9:59 PM IST

Updated : Oct 22, 2024, 6:19 AM IST

ಬೆಂಗಳೂರು:ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ದಿಢೀರ್ ಸಭೆ ನಡೆಸಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.

ನಾಳೆ ಮತ್ತೆ ಸಭೆ:ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ ಎನ್ನಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ಜೆಡಿಎಸ್​ ಮುಖಂಡರ ಸಭೆ ಕರೆದಿದ್ದಾರೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ಕರೆದು ಅಭ್ಯರ್ಥಿ ಅಂತಿಮಗೊಳಿಸುವಂತೆ ಕುಮಾರಸ್ವಾಮಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಪಕ್ಷದ ಕಚೇರಿ ಜೆ.ಪಿ.ಭವನಕ್ಕೆ ಬರುವಂತೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕುಮಾರಸ್ವಾಮಿ ಬುಲಾವ್ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ಅಭ್ಯರ್ಥಿ ಯಾರೆಂದು ಅಂತಿಮಗೊಳಿಸುವ ಸಾಧ್ಯತೆ ಇದೆ.

ದೇವೇಗೌಡರ ನಿವಾಸದಲ್ಲಿ ನಡೆದ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ನಾನು ಅಭ್ಯರ್ಥಿ ಅಂತ ಎಂದೂ ವೈಯಕ್ತಿಕವಾಗಿ ಹೇಳಿಲ್ಲ. ದೇವೇಗೌಡರು, ಕುಮಾರಣ್ಣ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತೇವೆ. ಕ್ಷೇತ್ರದಲ್ಲಿ ಸಾಧಕ-ಬಾಧಕ ನೋಡಿಕೊಂಡು ತೀರ್ಮಾನ ಮಾಡುತ್ತೇವೆ" ಎಂದು ಹೇಳಿದರು.

"ಎರಡು ಮೂರು ದಿನಗಳ ಹಿಂದೆ ಯೋಗೇಶ್ವರ್ ಜೊತೆ ನಮ್ಮ ಹಿರಿಯ ಮುಖಂಡರು ಚರ್ಚೆ ಮಾಡಿದ್ರು. ಜೆಡಿಎಸ್ ಚಿಹ್ನೆಯಡಿಯೂ ಸ್ಪರ್ಧೆಗೆ ಆಫರ್ ಕೊಟ್ರು. ಈ ಆಫರ್​​ಗೆ ಅವರು ಕುಮಾರಸ್ವಾಮಿ ಅವರನ್ನೂ ಕೇಳಿರಲಿಲ್ಲ. ಇದನ್ನು ನಮ್ಮ ಮುಖಂಡರೇ ನನಗೆ ಹೇಳಿದ್ರು" ಎಂದರು.

"ನಮ್ಮ ಮೈತ್ರಿಗೆ ತೊಂದರೆ ಆಗದ ರೀತಿಯಲ್ಲಿ ತೀರ್ಮಾನ ಮಾಡಬೇಕು. ಸಿ.ಪಿ.ಯೋಗೇಶ್ವರ್ ಇದುವರೆಗೂ ನಮ್ಮನ್ನು ಸಂಪರ್ಕ ಮಾಡಿಲ್ಲ. ನಿಖಿಲ್ ಕುಮಾರಸ್ವಾಮಿ ಆಕಾಂಕ್ಷಿ ಅಂತ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.‌ ನಾನು ಹೇಳಿಲ್ಲ. ಯಾವುದೇ ತೀರ್ಮಾನವನ್ನು ಮೈತ್ರಿ ನಾಯಕರು ತೆಗೆದುಕೊಳ್ಳಬೇಕು. ಕಾರ್ಯಕರ್ತರ ಅಭಿಪ್ರಾಯ ಬೇರೆ ಇರಬಹುದು. ನಾನು ವೈಯಕ್ತಿಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ" ಎಂದು ಹೇಳಿದರು.

"ನಾನು ಎರಡೂ ದಿನದ ಹಿಂದೆ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಬಿಜೆಪಿಗೆ ಬೆಂಬಲ‌ ನೀಡುವಂತೆ ಹೇಳಿದ್ದೇನೆ. ಮೂರು ಉಪಚುನಾವಣೆಯಲ್ಲಿ ಮೈತ್ರಿ ನಾಯಕರು ಗೆಲ್ಲಬೇಕು. ಬಿಜೆಪಿ ನಡೆ ಬಗ್ಗೆ ನಾನು ಚರ್ಚೆ ಮಾಡಲ್ಲ. ಸಿ.ಪಿ.ಯೋಗೇಶ್ವರ್ ಬಗ್ಗೆ ಬಿಜೆಪಿ ತೀರ್ಮಾನ ಮಾಡಬೇಕು, ನಾನು ಮಾಡಲ್ಲ" ಎಂದರು.

"ನಮ್ಮ ಕ್ಷೇತ್ರವನ್ನು ನಾವು ವಾಪಸ್ ಪಡೆಯುವುದರಲ್ಲಿ ತಪ್ಪಿಲ್ಲ.‌ ಯೋಗೇಶ್ವರ್ ಅವಶ್ಯಕತೆ ಇಲ್ಲ ಅಂತ ಅಂದುಕೊಂಡಿದ್ದರೆ ನಮ್ಮ ಮುಖಂಡರು ಯೋಗೇಶ್ವರ್ ಜೊತೆಗೆ ಸಭೆ ಮಾಡ್ತಿರಲಿಲ್ಲ. ಯೋಗೇಶ್ವರ್ ಬಿಟ್ಟು ಹೋಗುವ ಭಾವನೆ ನಮ್ಮಲ್ಲಿ ಇಲ್ಲ. ನಾವು ತೋರಿದ ಔದಾರ್ಯ ಸಿ.ಪಿ.ಯೋಗೇಶ್ವರ್ ಸಹ ತೋರಿಸಬೇಕು. ನಮ್ಮ ದಾರಿ ನಮಗೆ ಎಂಬ ಪ್ರಶ್ನೆ ಇಲ್ಲಿ ಬರಲ್ಲ. ನಾವು ಒಗ್ಗಟ್ಟಿನಿಂದ ಚುನಾವಣೆ ಮಾಡಬೇಕು" ಎಂದು ಪ್ರತಿಕ್ರಿಯೆ ನೀಡಬೇಕು.

"ಯೋಗೇಶ್ವರ್ ಬಹಳ ಹಿರಿಯರು. ನಾನು ಶಾಸಕ ಆಗಬೇಕು ಅಂತಿದ್ರೆ, ಕಳೆದ ಅಂಬೇಡ್ಕರ್ ಆಚರಣೆ ವೇಳೆ ಏನಾಗಿತ್ತು ಅಂತ ಅವರಿಗೆ ಗೊತ್ತಿದೆ. ಅನುಕಂಪಕ್ಕಾಗಿ ಕುಮಾರಸ್ವಾಮಿ ಮೇಲೆ ಆರೋಪ ಮಾಡುವುದು ಬೇಡ" ಎಂದು ತಿರುಗೇಟು ನೀಡಿದರು.

"ಟಿಕೆಟ್ ಕುರಿತು ರಾಜ್ಯ ಬಿಜೆಪಿಯ ವಿಚಾರವನ್ನು ಕೇಂದ್ರ ನಾಯಕರಿಗೆ ನೀಡುತ್ತೇವೆ. ಅವರೂ ಸಹ ಮಾಹಿತಿ ಪಡೆಯುತ್ತಿದ್ದಾರೆ. ಯಾವುದೇ ತೀರ್ಮಾನ ಕೈಗೊಳ್ಳಲು ಬಿಜೆಪಿ ವರಿಷ್ಠರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಏಕೆಂದರೆ ನಾವು ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು. ಮೈತ್ರಿಗೆ ಎಲ್ಲಿಯೂ ಕಪ್ಪು ಚುಕ್ಕೆ ಬರಬಾರದು" ಎಂದರು.

ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್; ಸ್ವತಂತ್ರ ಸ್ಪರ್ಧೆಗೆ ಸೈನಿಕನ ಇಂಗಿತ

Last Updated : Oct 22, 2024, 6:19 AM IST

ABOUT THE AUTHOR

...view details