ರಾಮನಗರ:ಚನ್ನಪಟ್ಟಣ ಚುನಾವಣಾ ಅಖಾಡಲ್ಲಿ ಇದೀಗ ಆಡಿಯೋ ಬಾಂಬ್ ಭಾರಿ ಸದ್ದು ಮಾಡುತ್ತಿದೆ. ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕುರಿತಾಗಿ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದನ್ನು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಇಂದು ಬಿಡುಗಡೆಗೊಳಿಸಿದ್ದಾರೆ.
ಸಿಪಿ ಯೋಗೇಶ್ವರ್ ಬಿಜೆಪಿಯಲ್ಲಿದ್ದ ಅವಧಿಯಲ್ಲಿ ಡಿಕೆ ಸುರೇಶ್ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕುಮಾರಸ್ವಾಮಿ ಮಾಧ್ಯಮದವರೆದುರು ರಿಲೀಸ್ ಮಾಡಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (ETV Bharat) ಆಡಿಯೋದಲ್ಲಿ ಏನಿದೆ?:ಇದೇ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಆಡಿಯೋ ವಿಚಾರವಾಗಿ ಡಿಕೆ ಸುರೇಶ್ ಮತ್ತು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಆಡಿಯೋದಲ್ಲಿ ಸಿಪಿವೈ ಟೋಪಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈಗ ಯಾರಿಗೆ ಟೋಪಿ ಹಾಕಲು ಕರೆದುಕೊಂಡು ಬಂದಿದ್ದಾರೆ ಗೊತ್ತಿಲ್ಲ ಎಂದು ಕಿಚಾಯಿಸಿದರು.
ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ಆರೋಪ ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಚನ್ನಪಟ್ಟಣ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ರಣತಂತ್ರ ಹೂಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎಂಬಂತೆ ಕುಮಾರಸ್ವಾಮಿ ಅವರು ಪುತ್ರನ ಗೆಲುವಿಗಾಗಿ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪ್ರಚಾರ:ಚನ್ನಪಟ್ಟಣ ತಾಲ್ಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಇಂದು ಎತ್ತಿನ ಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಿಗೆ ತೆರಳಿ ಮತಯಾಚನೆ ಮಾಡಿದರು. ಗುಡ್ಡೆ ತಿಮ್ಮಸಂದ್ರ ಗ್ರಾಮದಲ್ಲಿ ಹಳ್ಳಿಯ ಸೊಗಡಿನ ಮೂಲಕ ಎತ್ತಿನ ಗಾಡಿ ಓಡಿಸಿ ಮತದಾರರ ಗಮನ ಸೆಳೆದರು. ಈ ವೇಳೆ ಗ್ರಾಮದ ಮಹಿಳೆಯರು ನಿಖಿಲ್ ಅವರಿಗೆ ಅರತಿ ಬೆಳಗಿ ಬರಮಾಡಿಕೊಂಡರು. ಎತ್ತಿನಗಾಡಿಯಲ್ಲಿ ನಿಂತು ಜನರಿಗೆ ಎರಡೂ ಕೈ ಜೋಡಿಸುತ್ತಾ ತಮಗೆ ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ರಸ್ತೆ ಪಕ್ಕದಲ್ಲಿ ನಿಂತಿದ್ದ ಗ್ರಾಮಸ್ಥರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು.
ಕೈ ಅಭ್ಯರ್ಥಿ ಪರ ಡಿಕೆ ಸುರೇಶ್ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಇಂದು ಡಿಕೆ ಸುರೇಶ್ ಹಲವೆಡೆ ಪ್ರಚಾರ ನಡೆಸಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಕಾಲದಲ್ಲಿ ಅಭಿವೃದ್ಧಿ ಕುಂಠಿತ, ಜನಗಳಿಗೆ ಸ್ಪಂದಿಸದೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಬಹಳ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ. ಯೋಗೇಶ್ವರ್ ಅವರು ಕೆರೆಗಳಿಗೆ ನೀರು ತುಂಬಿಸಿ ಅವರ ಬದುಕು ಬದಲಾವಣೆ ಮಾಡುವ ಪ್ರಯತ್ನ ಮಾಡಿದ್ದ ಕಾರಣಕ್ಕೆ ಅವರಿಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿದ್ದಾರೆ ಎಂದರು.
ಸರ್ಕಾರದ ಹಗರಣಗಳ ವಿರುದ್ಧ ಹೋರಾಟವೆಂದು ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಹಾಗೂ ಬಿಜೆಪಿ ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ಕಳೆದ 7 ವರ್ಷಗಲ್ಲಿ ಎಂದಿಗೂ ಈ ಕ್ಷೇತ್ರದ ಜನರ ಕಷ್ಟ ಕೇಳಲು ಬಂದಿಲ್ಲ. ಈಗ ಮಗ ಹಾಗೂ ಮೊಮ್ಮಗನ ಗೆಲ್ಲಿಸಲು ಬಂದಿದ್ದಾರೆ. ಇಷ್ಟು ದಿನ ಜನರ ಕಷ್ಟ ಕೇಳಲು ಅವರು ಹಳ್ಳಿಗೆ ಹೋಗಿಲ್ಲ. ಅವರು ಎಂದಾದರೂ ಜನರ ಕಷ್ಟ ಕೇಳಲು ಹೋಗಿದ್ದರೆ, ಮಾಧ್ಯಮಗಳು ಅದರ ಬಗ್ಗೆ ಮಾಹಿತಿ ನೀಡಲಿ. ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಸಭೆ ಮಾಡಿದ್ದಾರೆ ಎಂದು ಮಾಹಿತಿ ನೀಡಲಿ ಎಂದರು.
ಇದನ್ನೂ ಓದಿ:ಸಂಸದೀಯ ಜಂಟಿ ಸಮಿತಿ ಒಂದು ನಾಟಕ ಕಂಪನಿ: ಡಿ.ಕೆ.ಶಿವಕುಮಾರ್ ವ್ಯಂಗ್ಯ