ಬೆಳಗಾವಿ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುಟ್ಟುವ 4 ವರ್ಷ ಮೊದಲು 1824ರಲ್ಲಿ ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ್ದು ಕಿತ್ತೂರು ರಾಣಿ ಚನ್ನಮ್ಮ. ಆದರೆ, ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು 1857ರಲ್ಲಿ ಎಂದು ನಮೂದಾಗಿದೆ. ಇದು ಚನ್ನಮ್ಮನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದ್ವಿಶತಮಾನದ ವಿಜಯೋತ್ಸವ ಸಂದರ್ಭದಲ್ಲಾದ್ರೂ ಇತಿಹಾಸದಲ್ಲಿ ಆಗಿರುವ ತಪ್ಪು ಸರಿಯಾಗಲಿ ಎಂಬ ಆಗ್ರಹ ಈಗ ಕೇಳಿ ಬರುತ್ತಿದೆ.
ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜನಿಸಿದ್ದು 1828ರ ನವೆಂಬರ್ 19. ಅವರು ಹುಟ್ಟುವ 4 ವರ್ಷ ಮೊದಲೇ ಅಂದರೆ 1824ರ ಅಕ್ಟೋಬರ್ 23ರಂದು ವೀರವನಿತೆ ಚನ್ನಮ್ಮನವರ ನೇತೃತ್ವದಲ್ಲಿ ಕಿತ್ತೂರು ಸಂಸ್ಥಾನವು ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿತ್ತು. ಇದಕ್ಕೆ ಇಂದು ಭರ್ತಿ 200 ವರ್ಷಗಳ ಸಂಭ್ರಮ. ಇಡೀ ಕಿತ್ತೂರು ನಾಡು ಸಂಭ್ರಮದಲ್ಲಿ ತೇಲುತ್ತಿದ್ದು, 3 ದಿನಗಳ ಕಾಲ ಅದ್ಧೂರಿ ಉತ್ಸವ ಆಚರಿಸಲಾಗುತ್ತಿದೆ. ಆದರೆ, ಕಿತ್ತೂರು ಕಲಿಗಳ ತ್ಯಾಗ, ಬಲಿದಾನಕ್ಕೆ ಸಿಗಬೇಕಾದ ಗೌರವ, ಮಾನ್ಯತೆ ಸಿಗದಿರುವುದು ವಿಪರ್ಯಾಸ.
ಚನ್ನಮ್ಮಾಜಿ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು:200 ವರ್ಷಗಳ ಬಳಿಕವಾದರೂ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 ಅಲ್ಲ, 1824 ಎಂಬುದನ್ನು ಇತಿಹಾಸದಲ್ಲಿ ಮತ್ತು ದೇಶದ ಎಲ್ಲ ರಾಜ್ಯಗಳ ಶಾಲಾ, ಕಾಲೇಜುಗಳ ಪಠ್ಯದಲ್ಲಿ ಅಧಿಕೃತವಾಗಿ ದಾಖಲಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ. ಕೇವಲ ರಾಜಕೀಯ ದಾಳಕ್ಕಾಗಿ ಚನ್ನಮ್ಮನ ಹೆಸರೇಳಿ ಭಾಷಣ ಮಾಡುವುದಲ್ಲ. ರಾಷ್ಟ್ರಮಟ್ಟದಲ್ಲಿ ರಾಣಿ ಚನ್ನಮ್ಮಾಜಿಗೆ ಗೌರವ ಸಿಗಬೇಕು. ಚನ್ನಮ್ಮಾಜಿ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮನವರ ಹೆಸರಿಟ್ಟು ಅಜರಾಮರಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.