ಬೆಂಗಳೂರು : ರಾಜ್ಯದಲ್ಲಿ ಅಕ್ಟೋಬರ್ ಹಾಗೂ ಡಿಸೆಂಬರ್ನ ಹಿಂಗಾರು ಹಂಗಾಮು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸರ್ಕಾರದ ಮುಂದಿರುವ ಇಲಾಖೆಯ ಹಿಂಗಾರು ಮುನ್ಸೂಚನಾ ವರದಿಯ ಸಮಗ್ರ ಚಿತ್ರಣ ಇಲ್ಲಿದೆ.
ಅಕ್ಟೋಬರ್ ತಿಂಗಳಲ್ಲಿ ಹಿಂಗಾರು ಮಳೆ ಈ ಬಾರಿ ವಾಡಿಕೆಗಿಂತ ಶೇ 58ರಷ್ಟು ಹೆಚ್ಚುವರಿಯಾಗಿ ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ವಾಡಿಕೆಯಂತೆ 114 ಎಂ. ಎಂ ಮಳೆ ಸುರಿದರೆ, ಈ ಬಾರಿ 181 ಎಂ. ಎಂ ಮಳೆ ಸುರಿದಿದೆ. 2023ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಕೇವಲ 41 ಎಂ. ಎಂ ಹಿಂಗಾರು ಮಳೆ ಸುರಿದು ಶೇ 64ರಷ್ಟು ಮಳೆ ಕೊರತೆ ಎದುರಾಗಿತ್ತು. 2022ರಲ್ಲಿ ಅಕ್ಟೋಬರ್ ತಿಂಗಳಲ್ಲಿ 170 ಎಂ. ಎಂ ಮಳೆ ಸುರಿದಿತ್ತು. ಈ ಬಾರಿ ಹಿಂಗಾರು ಮಳೆಯ ಅಬ್ಬರವೇ ಜೋರಾಗಿದೆ. ಅಷ್ಟೇ ಅಲ್ಲ ಖುಷಿಯ ಸುದ್ದಿ ಏನೆಂದರೆ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲೂ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಸರ್ಕಾರಕ್ಕೆ ಮುನ್ಸೂಚನಾ ವರದಿ ನೀಡಿದೆ.
ಜೂನ್ನಿಂದ ಸೆಪ್ಟೆಂಬರ್ವರೆಗೆ ರಾಜ್ಯಾದ್ಯಂತ ಶೇ15ರಷ್ಟು ಹೆಚ್ಚುವರಿ ಮುಂಗಾರು ಮಳೆ ಸುರಿದಿದೆ. ಅದರಂತೆ ದಕ್ಷಿಣ ಒಳನಾಡಿನಲ್ಲಿ 369 ಎಂ. ಎಂ ವಾಡಿಕೆ ಮಳೆಗೆ 408 ವಾಸ್ತವ ಮಳೆಯಾಗಿದ್ದು, ಶೇ11ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಇನ್ನು ಉತ್ತರ ಒಳನಾಡಿನಲ್ಲಿ 479 ಎಂ. ಎಂ ವಾಡಿಕೆ ಮಳೆ ಮುಂದೆ 534 ಎಂ. ಎಂ ಮಳೆಯಾಗಿ ಶೇ12ರಷ್ಟು ಅಧಿಕ ಮಳೆ ಸುರಿದಿದೆ. ಮಲೆನಾಡು ಪ್ರದೇಶದಲ್ಲಿ ವಾಡಿಕೆ 1556 ಎಂ. ಎಂ ಪ್ರತಿಯಾಗಿ 1,755 ಎಂ. ಎಂ ಮಳೆಯಾಗಿದೆ. ಶೇ.13ರಷ್ಟು ಅಧಿಕ ಮಳೆಯಾಗಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ 3,101 ಎಂ. ಎಂ ವಾಡಿಕೆ ಮಳೆ ಮುಂದೆ ವಾಸ್ತವದಲ್ಲಿ 3,736 ಎಂ. ಎಂ ಮಳೆಯಾಗಿದೆ. ಅಂದರೆ 20% ಅಧಿಕ ಮಳೆಯಾಗಿದೆ.
ನವೆಂಬರ್ ಹಾಗೂ ಡಿಸೆಂಬರ್ ಮಳೆ ಮುನ್ಸೂಚನೆ : ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಳೆ ಮುನ್ಸೂಚನೆ ವರದಿಯಂತೆ ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅದರಂತೆ ನವೆಂಬರ್ ತಿಂಗಳಲ್ಲಿ ರಾಜ್ಯದ ಕರಾವಳಿ, ಮಧ್ಯ ಕರ್ನಾಟಕ, ಬೆಂಗಳೂರು, ಹಳೆ ಮೈಸೂರು ಭಾಗಗಳಲ್ಲಿ ಹೆಚ್ಚಿನ ಹಿಂಗಾರು ಮಳೆಯ ಅಂದಾಜಿಸಲಾಗಿದೆ. ವಾಡಿಕೆಗಿಂತ 6 ಎಂ.ಎಂ ರಿಂದ 20 ಎಂ.ಎಂ ವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಮಳೆ ಕೊರತೆಯಾಗಲಿದೆ ಎಂದು ತಿಳಿಸಿದೆ.