ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯಂದಿರುಗಳಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಶಾಸಕ ಬಾಲರಾಜು ಕಮಲಪಡೆಯ ಹುರಿಯಾಳಾಗಿದ್ದಾರೆ.
2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಬಾಲರಾಜು ಬಳಿಕ ನಡೆದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೂ ಅದೃಷ್ಟ ಕೈ ಹಿಡಿದಿರಲಿಲ್ಲ. 2023ರ ಚುನಾವಣೆ ಸಂದರ್ಭ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಬಾಲರಾಜು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಾಲರಾಜು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರದಲ್ಲಿ ಮೊದಲ ಬಾರಿಗೆ ಶ್ರೀನಿವಾಸ್ ಪ್ರಸಾದ್ ಕಮಲ ಅರಳಿಸಿದ್ದರು.
ಟಿಕೆಟ್ ಆಕಾಂಕ್ಷಿಗಳು ಯಾರ್ಯಾರಿದ್ದರು? ಬಿಜೆಪಿಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸರತಿ ಸಾಲು ನಿರ್ಮಾಣವಾಗಿತ್ತು. ಎಸ್.ಬಾಲರಾಜು, ಪ್ರಸಾದ್ ಅಳಿಯಂದಿರಾದ ಡಾ. ಮೋಹನ್, ಹರ್ಷವರ್ಧನ್, ಎಸ್. ಮಹಾದೇವಯ್ಯ, ವೆಂಕಟರಮಣಸ್ವಾಮಿ ಪಾಪು ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು.
ಬಾಲರಾಜು ವಿವರ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಬಾಲರಾಜು 1991ರಲ್ಲಿ ಮುತ್ಸದ್ಧಿ ರಾಜಕಾರಣಿ ಎಂ. ರಾಜಶೇಖರಮೂರ್ತಿ ಅವರ ಗರಡಿಯಿಂದ ಬಂದ ರಾಜಕಾರಣಿಯಾಗಿದ್ದಾರೆ. ರಾಜಶೇಖರಮೂರ್ತಿ ಶಿಷ್ಯನಾಗಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ, 1993ರಲ್ಲಿ ಟಿಎಪಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾಗಿ, 1997ರಲ್ಲಿ ಯುವ ಕಾಂಗ್ರೆಸ್ ಚಾಮರಾಜನಗರ ವಿಭಾಗದ ಅಧ್ಯಕ್ಷರಾದರು. 1999ರಲ್ಲಿ ರಾಜಶೇಖರಮೂರ್ತಿ ಅವರೊಟ್ಟಿಗೆ ಬಿಜೆಪಿಗೆ ಸೇರ್ಪಡೆಗೊಂಡು ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 5,421 ಮತಗಳಿಂದ ಸೋಲು ಕಂಡರು.