ಮಂಡ್ಯ : ರಾಷ್ಟ್ರದ ವಿಚಾರದಲ್ಲಿ ನಾವು ಯಾವತ್ತೂ ದುಡುಕಿಲ್ಲ. ಈ ಜಿಲ್ಲೆಯ ಜನ ಋಣ ಇರುವವರು. ಅವರ ಜಿಲ್ಲೆ ಜನರಿಗಿಂತ ಹೆಚ್ಚಿನ ಪ್ರೀತಿ ಕಾಳಜಿ ತೋರಿದ್ರು. ಈ ಜಿಲ್ಲೆಯ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ಎಂದು ನೇರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಗೋಡು ಹನುಮ ಧ್ವಜ ವಿವಾದ ವಿಚಾರವಾಗಿ ಸಚಿವ ಎನ್ ಚಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,
ಜನರ ನೆಮ್ಮದಿ ಕೆಡಿಸಲು ಹೆಚ್ಡಿಕೆ ಬಂದಿದ್ದಾರೆ. ಇವತ್ತು ಧ್ವಜದ ವಿಚಾರವಾಗಿ ಪಾದಯಾತ್ರೆ, ಹೋರಾಟಕ್ಕೆ ಬಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಏಕೆ ಬರಲಿಲ್ಲ. ಮೈಶುಗರ್ ವಿಚಾರವಾಗಿ ದನಿ ಎತ್ತಲಿಲ್ಲ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ಅನ್ನೋದನ್ನ ಹೇಳಬೇಕಿತ್ತು. ಅದನ್ನ ಬಿಟ್ಟು ಹನುಮ ಧ್ವಜದ ವಿಚಾರವಾಗಿ ಬಂದಿದ್ದೀರಿ. ರಾಷ್ಟ್ರ ಧ್ವಜಕ್ಕಾಗಿ ಹೋರಾಟ ಮಾಡಿದ ಸ್ಥಳದಲ್ಲಿ ಧರ್ಮದ ವಿಚಾರವಾಗಿ ಗುಲ್ಲೆಬ್ಬಿಸುವ ಯತ್ನ ಮಾಡಿದ್ದೀರಿ. ನಿಮಗೆ ನಮ್ಮ ಮೇಲೆ ದ್ವೇಷ ಅಸೂಯೆ ಇರಬಹುದು. ಈ ಜಿಲ್ಲೆಯ ಜನ ನಿಮಗೆ ಏನು ಮಾಡಿದ್ದರು. ಈ ಜಿಲ್ಲೆಗೆ ನಿಮ್ಮ ಶಾಶ್ವತ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ರು.
ಸ್ವಾಭಿಮಾನ, ಗೌರವದ ವಿಚಾರದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಮಾದರಿ. ಜನತಾ ಪಕ್ಷವನ್ನ ನಿನ್ನೆಯೇ ಅಂತಿಮಗೊಳಿಸಿದ್ದೀರಿ. ನಿನ್ನೆ ಕೇಸರಿ ಶಾಲು ಹಾಕೊಂಡು ಪಕ್ಷದ ಅಂತಿಮ ಯಾತ್ರೆಗೆ ತಿಲಾಂಜಲಿ ಹಾಡಿದ್ದೀರಿ. ಇಷ್ಟು ದಿನ ಹಸಿರು ಶಾಲು ಹಾಕೊಂಡು ಹೋರಾಟ ಮಾಡುತ್ತಿದ್ರಿ. ನೀವು ಪಕ್ಷ ಸೇರ್ಪಡೆ ಆಗಿದ್ದರೆ ಜನತಾ ಪರಿವಾರದವರಿಗೆ ನೋವಾಗುತ್ತಿರಲಿಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ತಮ್ಮ ರಾಜಕೀಯಕ್ಕಾಗಿ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಹಾಡಿದ್ದೀರಿ. ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗೆ ಇಳಿಸಬೇಕಾ? ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಸರ್ಕಾರ, ಜಿಲ್ಲಾಡಳಿತ ಕಾನೂನು ಬದ್ಧವಾಗಿ ಏನು ಮಾಡಬೇಕೋ ಮಾಡಿದೆ. ನಿಮ್ಮ ಹೋರಾಟ ನೋಡಿದ್ರೆ ರಾಷ್ಟ್ರ ಧ್ವಜ ಇಳಿಸಬೇಕು ಅಂತಿದೆ ಎಂದರು.