ಬೆಂಗಳೂರು:ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್‌ಗೆ ಕೆಐಎಡಿಬಿಯಿಂದ ನಿಯಮ ಉಲ್ಲಂಘಿಸಿ ಜಮೀನು ಮಂಜೂರು ಮಾಡಲಾಗಿದೆ ಹಾಗೂ ಜಿಂದಾಲ್ಗೆ ಜಮೀನು ಮಂಜೂರು ಮಾಡುವಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಜಭವನಕ್ಕೆ ತೆರಳಿದ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು. ಎರಡು ಪ್ರಕರಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿ ಪ್ರತ್ಯೇಕವಾಗಿ ಎರಡು ದೂರುಗಳನ್ನು ಸಲ್ಲಿಕೆ ಮಾಡಿ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿದರು.
'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.
ನಂತರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 3,667 ಎಕರೆಯ ಪೈಕಿ 2 ಸಾವಿರ ಎಕರೆಯನ್ನು 1.20 ಲಕ್ಷಕ್ಕೆ ಹಾಗೂ 1,667 ಎಕರೆಯನ್ನು 1.50 ಲಕ್ಷಕ್ಕೆ ಕೊಡುವ ನಿರ್ಧಾರವನ್ನು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದಾರೆ. ಸಾವಿರಾರು ಕೋಟಿ ರೂ. ಕಿಮ್ಮತ್ತಿನ ಜಮೀನು ಕವಡೆ ಕಾಸಿಗೆ ಕೊಡಲು ಸರ್ಕಾರವು ಒಪ್ಪಿರುವುದು ವಿಷಾದನೀಯ ಸಂಗತಿ. ಜೆಎಸ್‍ಡಬ್ಲ್ಯೂ ಕಂಪೆನಿ ಜೊತೆ ಏನು ಒಳ ಒಪ್ಪಂದ ಆಗಿದೆ? ಸರ್ಕಾರದ ಕೋಟ್ಯಂತರ ರೂಪಾಯಿಯ ಆಸ್ತಿಯನ್ನು ಕೇವಲ 20 ಕೋಟಿಗೆ ಜೆಎಸ್‍ಡಬ್ಲ್ಯೂ ಕಂಪೆನಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಗೋಲ್‍ಮಾಲ್ ಅಡಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಎರಡನೇ ದೂರು ಸಲ್ಲಿಸಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಸಿಎ ನಿವೇಶನ ಮಂಜೂರಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ - Priyank Kharge