ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಸ್ಥೆಗಳಿಗೆ ಪ್ರಸಾದ ವಿತರಣೆಗೆ ನಿರ್ಬಂಧ ವಿಧಿಸಿರುವ ನಿರ್ಧಾರ ಸರಿಯಲ್ಲ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬಾರದು, ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಗೌರಿ ಗಣೇಶೋತ್ಸವ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದು, ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ಗಳಲ್ಲಿ ವಿತರಿಸುವ ಪ್ರಸಾದವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂಬುದಾಗಿ ನಿಯಮಗಳನ್ನು ಬಲವಂತವಾಗಿ ಹೇರಿರುವುದು ಗಣೇಶನ ಭಕ್ತರಿಗೆ ಮಾಡಿದ ಅವಮಾನ. ಹಲವಾರು ಭಕ್ತರು ತಮ್ಮ ತಮ್ಮ ಮನೆಗಳಿಂದ ಪ್ರಸಾದಗಳನ್ನು ತಯಾರಿಸಿ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ಗಳಲ್ಲಿ ವಿತರಿಸುತ್ತಿರುವುದು ಸರ್ವೆಸಾಮಾನ್ಯ, ಗಣೇಶನ ಭಕ್ತರು ಸಹ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕೆನ್ನುವುದು ವಿಪರ್ಯಾಸ ಎಂದು ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.