ಬೆಂಗಳೂರು:ಸಿಇಟಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿರುವ ಕಲಬುರಗಿ ಜಿಲ್ಲೆಯ ಕೆಲವು ಅಭ್ಯರ್ಥಿಗಳಿಗೆ ತಾವು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಾಂಶುಪಾಲರ ಮೂಲಕ ಇದೇ ಏ.12ರೊಳಗೆ ಮನವಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೂಚಿಸಿದೆ.
ಕಲಬುರಗಿಯ ಕೆಲವು ಅಭ್ಯರ್ಥಿಗಳು ತಮಗೆ ಪರೀಕ್ಷಾ ಕೇಂದ್ರ ಕೋಲಾರ ಜಿಲ್ಲೆಯಲ್ಲಿ ಹಂಚಿಕೆಯಾಗಿದೆ ಎಂದು ಕೆಇಎಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ತಿಳಿಸಿರುವ ಕಾರಣ ಅವರ ಅರ್ಜಿಗಳನ್ನು ಪರಿಶೀಲಿಸಿದಾಗ ಅವರೇ ಎಡಿಟ್ ಸಂದರ್ಭದಲ್ಲಿ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಪ್ಪಾಗಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರ ಬದಲಾವಣೆಗೆ ಅವರುಗಳು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಾಂಶುಪಾಲರ ಮುಖಾಂತರ ಸಕಾರಣವನ್ನು ನೀಡಿ ಮನವಿ ಸಲ್ಲಿಸಬೇಕು. ಮನವಿಯಲ್ಲಿ ಅಭ್ಯರ್ಥಿಯ ಹೆಸರು, ಅರ್ಜಿ ಸಂಖ್ಯೆ, ಸಿಇಟಿ ಪತ್ರ ಸಂಖ್ಯೆ, ಪ್ರವೇಶ ಪತ್ರದ ಪ್ರತಿ ಸಲ್ಲಿಸಬೇಕು. ಬಳಿಕ ಕಾಲೇಜಿನ ಪ್ರಾಂಶುಪಾಲರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರಕ್ಕೆ ಇ-ಮೇಲ್ (keauthority-ka@nic.in) ಮೂಲಕ ಏ.12ರಂದು ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು. ಕಲಬುರಗಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಜೇವರ್ಗಿ, ಬೀದರ್, ಯಾದಗಿರಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಮನವಿ ಸಲ್ಲಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಯುಜಿ ನೀಟ್ ಅಭ್ಯರ್ಥಿಗಳಿಗೆ ಅನ್ವಯವಾಗಲ್ಲ:ಯುಜಿ ನೀಟ್ ಪರೀಕ್ಷೆ ಮಾತ್ರ ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ಸಿಇಟಿ ಪ್ರವೇಶ ಪತ್ರ ಡೌನ್‌ಲೋಡ್ ಆಗುವುದಿಲ್ಲ. ಆದರೆ, ಅಂತಹ ಅಭ್ಯರ್ಥಿಗಳಿಗೆ ವೈದ್ಯಕೀಯ/ದಂತ ವೈದ್ಯಕೀಯ ಮತ್ತು ಆಯುಷ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ನಿರ್ದೇಶಕಿ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಗಗನಯಾನ್ ಯಾತ್ರೆ ಕಣ್ತುಂಬಿಕೊಳ್ಳಲು ಜವಾಹರಲಾಲ್ ನೆಹರು ತಾರಾಲಯದಲ್ಲಿ ಸ್ಕೈ ಶೋ - Sky Show Exhibition