ಬೆಂಗಳೂರು ಗ್ರಾಮಾಂತರ:ಇತ್ತೀಚೆಗೆ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟ ಇಬ್ಬರು ಪೌರಕಾರ್ಮಿಕರ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ತಲಾ 10 ಲಕ್ಷ ರೂ. ಪಾವತಿಸಲಾಗಿದೆ. ನಿಯಮಾವಳಿಯಂತೆ ಸಾವಿಗೀಡಾದ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂ.ಗಳನ್ನು ಪಾವತಿಸಲು ತಾಕೀತು ಮಾಡಲಾಗಿದೆ ಎಂದು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ.ಪಿ.ಪಿ.ವಾವ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರು ಎಷ್ಟೇ ಒತ್ತಾಯಿಸಿದರೂ ಮ್ಯಾನ್ ಹೋಲ್ಗಳ ಒಳಗೆ ಇಳಿಯಬಾರದು. ಅದಕ್ಕಾಗಿಯೇ ಇರುವ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರಗಳನ್ನು ಬಳಸಬೇಕು. ಹಾಗೂ ಇತ್ತೀಚೆಗೆ ರೋಬೋಟ್ಗಳು ಬಂದಿದ್ದು, ಅವುಗಳ ಸಹಾಯದಿಂದ ಮ್ಯಾನ್ ಹೋಲ್ಗಳನ್ನು ಸ್ವಚ್ಛ ಮಾಡಬಹುದಾಗಿದೆ ಎಂದರು.
ಯಂತ್ರಗಳ ಖರೀದಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸಿನ ಕೊರತೆಯಿದ್ದರೆ ಸ್ಥಳೀಯ ಕಾರ್ಖಾನೆಗಳ ಸಿಎಸ್ಆರ್ ನಿಧಿಯ ನೆರವು ಪಡೆಯಿರಿ ಎಂದು ತಿಳಿಸಿದರು. ಸಫಾಯಿ ಕರ್ಮಚಾರಿಗಳ ಗುರುತಿನ ಪತ್ರಗಳನ್ನು ವೀಕ್ಷಿಸಿದ ಅವರು, ಗುರುತಿನ ಪತ್ರದಲ್ಲಿ ಕಾರ್ಮಿಕರ ಪಿ.ಎಫ್. ಸಂಖ್ಯೆ, ಇ.ಎಸ್.ಐ ಸಂಖ್ಯೆ ಹಾಗೂ ಬ್ಲಡ್ ಗ್ರೂಪ್ ಸೇರಿ ಅಗತ್ಯ ಮಾಹಿತಿ ಇರುವುದು ಕಡ್ಡಾಯ ಎಂದು ತಾಕೀತು ಮಾಡಿದರು.