ಕರ್ನಾಟಕ

karnataka

ETV Bharat / state

ಗ್ರಾಹಕರ ಕಣ್ಣೀರೊರೆಸಲು ಮುಂದಾದ ಕೇಂದ್ರ: ಇನ್ಮುಂದೆ 35 ರೂಪಾಯಿಗೆ ಕೆ.ಜಿ ಈರುಳ್ಳಿ - Onion Retail Sale - ONION RETAIL SALE

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈರುಳ್ಳಿ ಮಾರಾಟದ ಸಂಚಾರಿ ವಾಹನಗಳಿಗೆ ಗುರುವಾರ ಹಸಿರು ನಿಶಾನೆ ತೋರಿದರು.

35 ರೂ. ಕೆಜಿ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಸಚಿವ ಪ್ರಹ್ಲಾದ್​ ಜೋಶಿ ಅವರಿಂದ ಹಸಿರು ನಿಶಾನೆ
ಈರುಳ್ಳಿ ಮಾರಾಟದ ಸಂಚಾರಿ ವಾಹನಗಳಿಗೆ ಸಚಿವ ಪ್ರಹ್ಲಾದ್​ ಜೋಶಿ ಚಾಲನೆ (ETV Bharat)

By ETV Bharat Karnataka Team

Published : Sep 6, 2024, 9:21 AM IST

Updated : Sep 6, 2024, 9:26 AM IST

ನವದೆಹಲಿ/ಹುಬ್ಬಳ್ಳಿ:ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಒಂದು ಕೆ.ಜಿಗೆ 35 ರೂ. ದರದಲ್ಲಿ ವಿತರಣೆ ಆರಂಭಿಸಿದೆ.

ನವದೆಹಲಿಯಲ್ಲಿ ಗುರುವಾರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ 3 ಈರುಳ್ಳಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಈಗ ಏರಿಕೆ ಕಂಡಿರುವ ಈರುಳ್ಳಿ ದರ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದರು.

ಮುಂದಿನ ವಾರ ಬೆಂಗಳೂರಿನಲ್ಲಿ ವಿತರಣೆ: "ದೆಹಲಿಯ ಎನ್​ಸಿಆರ್​ ಮತ್ತು ಮುಂಬೈನಲ್ಲಿ ನಿನ್ನೆಯಿಂದ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಮುಂದಿನ ವಾರ ಬೆಂಗಳೂರು ಸೇರಿದಂತೆ ಕೋಲ್ಕತ್ತಾ, ಗುವಾಹಟಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ರಾಯಪುರ ಮತ್ತು ಭುವನೇಶ್ವರದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ವಿತರಣೆ ಶುರುವಾಗಲಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ದೇಶಾದ್ಯಂತ ವಿತರಣೆ ನಡೆಯಲಿದೆ" ಎಂದು ಅವರು ಮಾಹಿತಿ ನೀಡಿದರು.

4.7 ಲಕ್ಷ ಟನ್ ಈರುಳ್ಳಿ ಲಭ್ಯ- ಸಚಿವ​​ ಜೋಶಿ:"ಹಿಂಗಾರು ಹಂಗಾಮಿನಲ್ಲಿ ಬೆಳೆದ 4.7 ಲಕ್ಷ ಟನ್​ ಈರುಳ್ಳಿ ಸದ್ಯ ಸಂಗ್ರಹವಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್‌) ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್​ ಪ್ಲಾಟ್‌ಫಾರ್ಮ್‌ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್​ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.

ಮುಂದುವರೆದು, "ಬೆಲೆ ಪ್ರವೃತ್ತಿಗೆ ಅನುಗುಣವಾಗಿ ಈರುಳ್ಳಿಯ ಪ್ರಮಾಣ ಮತ್ತು ವಿಲೇವಾರಿ ಮಾರ್ಗಗಳನ್ನು ವಿಸ್ತರಿಸಲಾಗುತ್ತದೆ. ಗ್ರಾಹಕ ವ್ಯವಹಾರಗಳ ಇಲಾಖೆ, ದೇಶಾದ್ಯಂತ 550 ಕೇಂದ್ರಗಳು ವರದಿ ಮಾಡಿದ ಈರುಳ್ಳಿ ಸೇರಿದಂತೆ 38 ಸರಕುಗಳ ದೈನಂದಿನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಕಳೆದ ವರ್ಷ 3 ಲಕ್ಷ ಟನ್ ಈರುಳ್ಳಿ ಖರೀದಿಸಿದ್ದು, ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಅದಕ್ಕಿಂತ ಹೆಚ್ಚು 4.7 ಲಕ್ಷ ಟನ್​ ಖರೀದಿಸಿ ಬೆಲೆ ಸ್ವೀಕರಿಸುವುದು ಗಮನಾರ್ಹ" ಎಂದರು.

"ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ರೈತರು ಮತ್ತು ರೈತ ಸಂಘಗಳಿಂದ ಈರುಳ್ಳಿ ಖರೀದಿಸಲಾಗಿದೆ. ರೈತರ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಹಣ ಪಾವತಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ ವರ್ಷದ 693 ರಿಂದ 1,205 ರೂ. ಕ್ವಿಂಟಲ್​ನಂತೆ ಖರೀದಿಸಿದ್ದರೆ ಈ ಬಾರಿ 1,230 ರಿಂದ 2,578 ರೂ. ದರ ನೀಡಿ ಖರೀದಿಸಲಾಗಿದೆ" ಎಂದು ವಿವರ ನೀಡಿದರು.

"ಈ ಬಾರಿ ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆ ಪ್ರದೇಶ ಹೆಚ್ಚಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.102ರಷ್ಟು ಹೆಚ್ಚು ಬಿತ್ತನೆಯಾಗಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಈರುಳ್ಳಿ ಲಭ್ಯತೆ ಮತ್ತು ಬೆಲೆ ಸಕಾರಾತ್ಮಕವಾಗಿರುತ್ತದೆ. ಕೃಷಿ ಇಲಾಖೆ ಮಾಹಿತಿಯಂತೆ 2024ರ ಆಗಸ್ಟ್ 26ರವರೆಗೆ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ದೇಶದಲ್ಲಿ ರೈತರು ಮತ್ತು ವರ್ತಕರಲ್ಲಿ ಸುಮಾರು 38 ಲಕ್ಷ ಟನ್ ಈರುಳ್ಳಿ ಇನ್ನೂ ಸಂಗ್ರಹವಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಈರುಳ್ಳಿಯ ಲಭ್ಯತೆ ಮತ್ತು ಬೆಲೆಗಳ ಮೇಲೆ ತೀವ್ರ ನಿಗಾ ಇರಿಸಿದೆ" ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ: OTS ಯೋಜನೆ ಅವಧಿ ವಿಸ್ತರಣೆಗೆ ಸುಗ್ರೀವಾಜ್ಞೆ ತರಲು ಸಂಪುಟ ಅಸ್ತು - BBMP Property Tax Arrears

Last Updated : Sep 6, 2024, 9:26 AM IST

ABOUT THE AUTHOR

...view details