ಬೆಂಗಳೂರು: ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಬರ ಪರಿಹಾರಕ್ಕೆ ಕಾನೂನು ಹೋರಾಟ ನಡೆಸಿದ್ದ ರಾಜ್ಯ ಸರ್ಕಾರಕ್ಕೆ ಜಯ ಸಿಕ್ಕಿದೆ.
ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದ್ರೆ, ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡಿತ್ತು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಕೂಡ ನಡೆದಿತ್ತು. ಈ ವೇಳೆ ಕೇಂದ್ರ ಹಣ ಬಿಡುಗಡೆಯ ಬಗ್ಗೆ ಭರವಸೆ ನೀಡಿತ್ತು. ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರವಾಗಿ ಏಪ್ರಿಲ್ 29ರೊಳಗೆ ಸೂಕ್ತ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಲು ಚುನಾವಣಾ ಆಯೋಗವೂ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಕೋರ್ಟ್‌ಗೆ ಈ ಮಾಹಿತಿ ನೀಡಿದ್ದರು. ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಪರಿಹರಿಸಲು ಅವಕಾಶ ನೀಡಿದೆ. ಮುಂದಿನ ಸೋಮವಾರದೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದ್ದರು.
ಸುಪ್ರೀಂಕೋರ್ಟ್ಗೆ ನೀಡಿದ ಭರವಸೆಯಂತೆ ಸೋಮವಾರದೊಳಗಾಗಿಯೇ ಪರಿಹಾರ ಬಿಡುಗಡೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರದಿಂದ ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ: ರಾಜ್ಯ ಸರ್ಕಾರಕ್ಕೆ ಒಲಿದ ಜಯ ಇದನ್ನೂ ಓದಿ:ಏ.29ರೊಳಗೆ ಕರ್ನಾಟಕದ ಬರ ಪರಿಹಾರ ಹಣ ಬಿಡುಗಡೆಗೆ ಕ್ರಮ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಭರವಸೆ - Drought Relief Fund
ಸೌಹಾರ್ದತೆ ಮುಖ್ಯ ಎಂದಿದ್ದ ಕೋರ್ಟ್: ತನ್ನ ಪಾಲಿನ ಬರ ಪರಿಹಾರ ಕೊಡಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 22 ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿತ್ತು. ಕೇಂದ್ರ ಈ ವೇಳೆ ಹಣ ಬಿಡುಗಡೆಯ ಭರವಸೆಯನ್ನ ಕೋರ್ಟ್‌ಗೆ ನೀಡಿತ್ತು. ಇದಾದ ಬಳಿಕ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತ್ತು. ಸೋಮವಾರ ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯಲಿದೆ.
ಕರ್ನಾಟಕದ ವಾದವೇನು?:ಕರ್ನಾಟಕದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆಗೆ ತ್ವರಿತ ನಿರ್ಧಾರ ಕೈಗೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅವರು ಪೀಠವನ್ನು ಕೋರಿಕೊಂಡಿದ್ದರು.
ರಾಜ್ಯ ಗಂಭೀರ ಮಾನವೀಯ ಸಂಕಷ್ಟ, ವಿಪತ್ತು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬರ ಪರಿಹಾರಕ್ಕಾಗಿ 35,162 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಎನ್‌ಡಿಆರ್‌ಎಫ್ ಪ್ರಕಾರ, ಬರಗಾಲದ ಹಣಕಾಸಿನ ನೆರವು ಬಿಡುಗಡೆ ಮಾಡದಿರುವ ಕೇಂದ್ರ ಸರ್ಕಾರದ ಕ್ರಮವು ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅವರು ವಾದಿಸಿದ್ದರು.
ಕರ್ನಾಟಕ ಕೇಳಿದ 35 ಸಾವಿರ ಕೋಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರ ಇದೀಗ 3,454ಕೋಟಿ ರೂ ಅಂದರೆ ಶೇ 10 ರಷ್ಟು ಪರಿಹಾರವನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಬರ ಪರಿಹಾರ ಕೊಟ್ಟು ಕರ್ನಾಟಕಕ್ಕೆ ಬನ್ನಿ, ಇಲ್ಲವಾದರೆ ಮತ ಕೇಳುವ ನೈತಿಕತೆ ಇಲ್ಲ: ಕೇಂದ್ರದ ವಿರುದ್ಧ ಸಿಎಂ ಗರಂ - Congress Protest