ಬೆಳಗಾವಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮತ್ತು ರೈತಪರ ಹೋರಾಟಗಾರರು ಕೇಂದ್ರ ಸರ್ಕಾರದ ಬಜೆಟ್ ಜನರ ನಿರೀಕ್ಷೆ ಹುಸಿ ಮಾಡಿದೆ ಎಂದು ಹೇಳಿದ್ದಾರೆ.
ಬಜೆಟ್ ಜನರ ನಿರೀಕ್ಷೆ ತಕ್ಕಂತೆ ಇಲ್ಲ:ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಕೇಂದ್ರ ಬಜೆಟ್ ಜನರ ನಿರೀಕ್ಷೆ ತಕ್ಕಂತೆ ಇಲ್ಲ, ಏಪ್ರಿಲ್ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಆ ಹಿನ್ನೆಲೆಯಲ್ಲಿ ಏನಾದರೂ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಪೆಟ್ರೋಲ್, ಡೀಸೆಲ್ ದರ ಇಳಿಕೆ, ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಅವು ಯಾವುದೂ ಇದರಲ್ಲಿ ಇಲ್ಲ.
ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡ್ತೇವಿ ಎಂದು ಹೇಳಿದ್ದಾರೆ. ಆಯುಷ್ಮಾನ್ ಯೋಜನೆಯನ್ನು ಆಶಾ ಕಾರ್ಯಕರ್ತೆಯರಿಗೆ ವಿಸ್ತರಿಸುವ ಬಗ್ಗೆ ಘೋಷಿಸಿದ್ದು, ಬಿಟ್ಟರೆ ಜನ ಸಾಮಾನ್ಯರಿಗೆ ಅನುಕೂಲ ಆಗುವ ಜನಪರ ಬಜೆಟ್ ಇದಲ್ಲ. ಜನ ನಿರೀಕ್ಷೆ ಹುಸಿಯಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಬಜೆಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ:ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣನವರ ಮಾತನಾಡಿ, ಈ ಬಜೆಟ್ನಿಂದ ರೈತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಬಡಜನರಿಗೆ ಯಾವುದೇ ಅನುಕೂಲ ಆಗಿಲ್ಲ. ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆ ಇತ್ತು. ಆದರೆ ಅದು ಆಗಿಲ್ಲ. ಗ್ರಾಮೀಣ ಭಾಗದ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಿದ್ದು ಖಂಡಿಸುತ್ತೇವೆ. ರೈತ ಮಹಿಳೆಯರು ಉದ್ಯೋಗವಂತರಾಗಬೇಕು. ಆದರೆ, ಅದಕ್ಕೆ ಪೂರಕವಾಗಿ ಬಜೆಟ್ ಮಂಡನೆ ಆಗಿಲ್ಲ. ಹೀಗಾಗಿ ಇದು ಶೂನ್ಯ ಬಜೆಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.