ಕರ್ನಾಟಕ

karnataka

ETV Bharat / state

ರೈತರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ - Minimum Support Price

ಬೆಂಬಲ ಬೆಲೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಸಚಿವ ಶಿವಾನಂದ ಪಾಟೀಲ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

MINIMUM SUPPORT PRICE
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 24, 2024, 3:54 PM IST

ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಾರುಕಟ್ಟೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಧಾರಣಿ ಕುಸಿದ ಕಾರಣ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 22,215 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಬೆಂಬಲ ಬೆಲೆ ಯೋಜನೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್​ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಸಮ್ಮತಿಸಿರುವುದರಿಂದ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಧಾರಣಿ ಕುಸಿದಿದೆ ಎಂದು ರೈತರು ಆತಂಕ ಪಡುವ ಅಗತ್ಯವಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದಂತೆ ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯುವ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಗತ್ಯ ಇರುವ ಕಡೆ ಖರೀದಿ ಕೇಂದ್ರಗಳನ್ನು ಗುರುತಿಸಿ ನೋಂದಣಿ ಆರಂಭಿಸಲಿದ್ದಾರೆ. ನಂತರ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ವಿಳಂಬ ಮಾಡದೆ ಟಾಸ್ಕ್ ಫೋರ್ಸ್ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ರೈತರ ಹಿತದೃಷ್ಟಿಯಿಂದ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದೂ ಸಹ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕನಿಷ್ಠ ಬೆಂಬಲ ಬೆಲೆ ಎಂದರೇನು?, ಯಾವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಗೊತ್ತೇ? - Minimum Support Price

ABOUT THE AUTHOR

...view details