ಧಾರವಾಡ:ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಬಳಿಕ ಕೇಂದ್ರದ ಮೋದಿ ಸರ್ಕಾರ ಅಲ್ಲಾಡಲಿದೆ. ಈಗಾಗಲೇ ಬಿಜೆಪಿಯವರ ನಂಬರ್ ಕಡಿಮೆ ಇದೆ. ಸದ್ಯದ ಸರ್ವೇ ರಿಪೋರ್ಟ್ಗಳು ಎಲ್ಲೆಡೆ ಬಿಜೆಪಿ ಸೋಲುತ್ತದೆ ಎಂದು ಹೇಳಿವೆ. ಹೀಗಾಗಿ ಅವರಿಗೆ ಭಯವಿದೆ. ಆದರೆ, ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ. ಐದು ವರ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗದು ಎಂದು ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದಿದ್ದಾರೆ.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ಎಲ್ಲ ಶಾಸಕರು, ಸಚಿವರು, ಸಂಸದರು, ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿದ್ದೇವೆ. ನಾವು ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದರು.
ಇನ್ನು, ಬಿಜೆಪಿ ಹಗರಣಗಳ ತನಿಖೆಗೆ ಚುರುಕು ಮುಟ್ಟಿಸಲು ಸಮಿತಿ ರಚಿಸಿರುವ ಸಿಎಂ, ನಮಗೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ ಎಂದು ಸಚಿವ ಲಾಡ್ ಹೇಳಿದರು. ಹಗರಣ ಪ್ರಕರಣಗಳ ತನಿಖೆಯ ಸಮನ್ವಯ ಸಮಿತಿ ಸದಸ್ಯನನ್ನಾಗಿ ನನ್ನನ್ನು ಸಿಎಂ ನೇಮಿಸಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ ಅವರಿದ್ದಾರೆ. ಸಭೆ ಕರೆದಾಗ ಹೋಗುತ್ತೇವೆ, ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.