ಕರ್ನಾಟಕ

karnataka

ETV Bharat / state

ಸೌಹಾರ್ದಯುತವಾಗಿ ಗಣೇಶ ಹಬ್ಬ, ಈದ್ ಮಿಲಾದ್ ಆಚರಿಸಿ: ಎಸ್​ಪಿ ಉಮಾ ಪ್ರಶಾಂತ್ - SP Uma Prashant

ನಾವೆಲ್ಲರೂ ಭಾರತೀಯರು. ಇಲ್ಲಿನ ಸಂಸ್ಕೃತಿ ಗೌರವಿಸಬೇಕು. ಗಣೇಶ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕರೆ ನೀಡಿದ್ದಾರೆ.

ಎಸ್​ಪಿ ಉಮಾ ಪ್ರಶಾಂತ್
ಎಸ್​ಪಿ ಉಮಾ ಪ್ರಶಾಂತ್ (ETV Bharat)

By ETV Bharat Karnataka Team

Published : Sep 7, 2024, 8:21 PM IST

Updated : Sep 7, 2024, 10:59 PM IST

ಎಸ್​ಪಿ ಉಮಾ ಪ್ರಶಾಂತ್ (ETV Bharat)

ದಾವಣಗೆರೆ:ಜಿಲ್ಲಾದ್ಯಂತ ಒಟ್ಟು 2,098 ಗಣೇಶ‌ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಯೊಂದು ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಹಿನ್ನೆಲೆ ನಡೆದ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ಒಟ್ಟು 2,098 ಗಣೇಶಮೂರ್ತಿ ಪ್ರತಿಷ್ಠಾಪನೆಯಾದ ಸ್ಥಳಗಳ ಪೈಕಿ 12 ಅತಿ ಸೂಕ್ಷ್ಮ, 146 ಸೂಕ್ಷ್ಮ, ‌1,940 ಸಾಮಾನ್ಯ ಎಂದು ಗುರುತಿಸಲಾಗಿದೆ. ಕಮ್ಯೂನಲ್ ಗೂಂಡಾ ಮತ್ತು ರೌಡಿಶೀಟರ್​ಗಳ ಮೇಲೆ ನಿಗಾ ವಹಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು, ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಹಬ್ಬಿಸಿದರೆ ಕಠಿಣ ಕ್ರಮ ಜರುಗಿಸುತ್ತೇವೆ. ಏನೇ ಘಟನೆ ನಡೆದರೂ ಆಯೋಜಕರು ಪೊಲೀಸ್​ ಇಲಾಖೆ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ನಾವೆಲ್ಲರೂ ಭಾರತೀಯರು. ಇಲ್ಲಿನ ಸಂಸ್ಕೃತಿ ಗೌರವಿಸಬೇಕು. ಗಣೇಶ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ. ಆದರೆ, ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯ ಬೇಕು ಎಂದರೆ 112 ಮೂಲಕ ಪೊಲೀಸರಿಗೆ ಕರೆ ಮಾಡಿ. ನಿಗದಿಪಡಿಸಿದ ರಸ್ತೆಗಳಲ್ಲೇ ಸಾಗಿ, ನಿಗದಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆಯ ಮಾರ್ಗವನ್ನು ಬದಲಾಯಿಸಬಾರದು. ನಿಗದಿ ಮಾರ್ಗದಲ್ಲಿ ಸಂಚರಿಸುವಾಗಲೂ ಸೂಕ್ಷ್ಮ ಪ್ರದೇಶದಲ್ಲಿ ಬೇಕಾಬಿಟ್ಟಿ ವರ್ತಿಸಬಾರದು. ಪೊಲೀಸರ ಸೂಚನೆಯಂತೆ ನಡೆದುಕೊಳ್ಳುವ ಮೂಲಕ, ಎಲ್ಲರೂ ಶಾಂತಿ, ಸೌಹಾರ್ದಯುತವಾಗಿ ಈದ್ ಮಿಲಾದ್ ಮತ್ತು ಗಣೇಶ ಹಬ್ಬ ಆಚರಿಸಿ ಎಂದು ಕರೆ ನೀಡಿದರು.

ಮಕ್ಕಳಿಗೆ ಗಣೇಶ ಹಬ್ಬದ ಚಂದಾ ಜೊತೆ ಚಾಕೊಲೇಟ್ ನೀಡಿದ ಸಂಸದೆ:ಮತ್ತೊಂದೆಡೆ,ಗಣೇಶ ಹಬ್ಬದ ಚಂದಾ ಕೇಳಲು ಬಂದ ಮಕ್ಕಳಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಚಂದಾ ಹಣದ ಜೊತೆ ಚಾಕೊಲೇಟ್ ನೀಡಿ ಚೆನ್ನಾಗಿ ವ್ಯಾಸಂಗ ಮಾಡುವಂತೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ದಾವಣಗೆರೆ ನಗರದ ಎಂಸಿಸಿಬಿ ಬ್ಲಾಕ್​ನಲ್ಲಿರುವ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಮಕ್ಕಳು ಗಣೇಶ ಹಬ್ಬಕ್ಕೆ ಚಂದಾ ಕೇಳಲು ಬಂದಿದ್ದರು. ಆ ಮಕ್ಕಳನ್ನು ಪ್ರೀತಿಯಿಂದ ಹತ್ತಿರ ಕರೆದು ಹಣದ ಜೊತೆಗೆ ಚಾಕೊಲೇಟ್ ನೀಡಿ, ಆತ್ಮೀಯವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ-ಮುಸ್ಲಿಂ ಸ್ನೇಹಿತರ ಭಾವೈಕ್ಯತೆ - Harmony of Hindu Muslim friends

Last Updated : Sep 7, 2024, 10:59 PM IST

ABOUT THE AUTHOR

...view details