ಬೆಳ್ತಂಗಡಿ(ದಕ್ಷಿಣ ಕನ್ನಡ):ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನಾ ಸ್ಥಳಕ್ಕೆ ತುರ್ತು ಮತ್ತು ಅಗ್ನಿಶಾಮಕ ದಳದ ಡಿಐಜಿ ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ, ಎಫ್ಎಸ್ಎಲ್, ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆಗಿದ್ದರು.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ತ್ಯಾರ್ನಲ್ಲಿ ಸೋಲಿಡ್ ಫೈರ್ ವರ್ಕ್ಸ್ ಎಂಬ ಹೆಸರಿನ ಪಟಾಕಿ ತಯಾರಿಕಾ ಘಟಕ ನಡೆಸುತ್ತಿದ್ದ ಸೈಯದ್ ಬಶೀರ್ ಎಂಬವರ ಗೋಡೌನ್ ಪಕ್ಕದ ಮತ್ತೊಂದು ಶೆಡ್ನಲ್ಲಿ ಜ.28ರಂದು ಸಂಜೆ ಸ್ಫೋಟ ಸಂಭವಿಸಿತ್ತು. ಕೇರಳದ ಸ್ವಾಮಿ ಯಾನೆ ಕುನ್ನಿ ನಾರಾಯಣ(55), ಕೇರಳದ ವರ್ಗಿಸ್(68), ಹಾಸನದ ಚೇತನ್(24) ಸಾವನ್ನಪ್ಪಿದ್ದರು.
ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣಕ್ಕೆ ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ. ಸೋಮವಾರ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಅವರು, "ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಉತ್ಸವಗಳಿಗೆ ಮಾಲಕ ಬಶೀರ್ ಅವರಿಂದ ಪಟಾಕಿಗಳನ್ನು ಖರೀದಿಸುತ್ತಿದ್ದರು. ಸದ್ಯ ಮಾಲಿಕರಿಗೆ ಮೈಸೂರಿನಿಂದ ಆರ್ಡರ್ ಬಂದಿತ್ತು. ಇದಕ್ಕಾಗಿ ದೊಡ್ಡ ಪ್ರಮಾಣದ ಪಟಾಕಿ ತಯಾರಿಸುತ್ತಿದ್ದರು. ಒಂದು ಸ್ಥಳದಲ್ಲಿ ಪಟಾಕಿ ತಯಾರಿಸಿ, ಮತ್ತೊಂದು ಸ್ಥಳದಲ್ಲಿ ಶೇಖರಣೆ ಮಾಡುತ್ತಿದ್ದರು. ಕಡಿಮೆ ತೀವ್ರತೆಯ ಸುಡುಮದ್ದುಗಳನ್ನು ಒಂದೇ ಜಾಗದಲ್ಲಿಟ್ಟ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಬಶೀರ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದೇವೆ. ಸಾವನ್ನಪ್ಪಿರುವ ಮೂವರ ಕುಟುಂಬದವರಿಗೂ ಮಾಹಿತಿ ನೀಡಿದ್ದೇವೆ. ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ಮಾಡುತ್ತೇವೆ. ಸ್ಥಳೀಯರ ದೂರು ಪಡೆದುಕೊಂಡು ತನಿಖೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಮದ್ಯಪಾನಕ್ಕೆ ಹಣ ನೀಡದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ