ಕರ್ನಾಟಕ

karnataka

ETV Bharat / state

ಗಣರಾಜ್ಯೋತ್ಸವದ ನಡುವೆ ಮೈದಾನಕ್ಕೆ ನುಗ್ಗಿದ್ದ ವ್ಯಕ್ತಿ ಈ ಹಿಂದೆಯೂ ಅವಾಂತರ ಸೃಷ್ಟಿಸಿದ್ದ

ಮಾಣಿಕ್ ಶಾ ಪರೇಡ್ ಮೈದಾನಕ್ಕೆ ನುಗ್ಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆಯೂ ಅವಾಂತರ ಸೃಷ್ಟಿಸಿರುವುದು ತಿಳಿದು ಬಂದಿದೆ.

ಆರೋಪಿ ಪರಶುರಾಮ್
ಆರೋಪಿ ಪರಶುರಾಮ್

By ETV Bharat Karnataka Team

Published : Jan 27, 2024, 12:49 PM IST

ಬೆಂಗಳೂರು :75ನೇಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮಾಣಿಕ್ ಶಾ ಪರೇಡ್ ಮೈದಾನಕ್ಕೆ ನುಗ್ಗಿದ್ದ ಆರೋಪಿಯು ಈ ಹಿಂದೆಯೂ ಇಂಥಹದ್ದೇ ಕೃತ್ಯಗಳ ಮೂಲಕ ಪೊಲೀಸ್ ಅತಿಥಿಯಾಗಿದ್ದ ಎಂಬುದು ಆತನ ವಿಚಾರಣೆ ವೇಳೆ ಬಯಲಾಗಿದೆ. ಆರೋಪಿ ಪರಶುರಾಮ್ ಸರ್ಕಾರದ ನಿರ್ಧಾರದಿಂದ ತನ್ನ ಕೆಲಸದ ಕನಸಿಗೆ ಕುತ್ತು ಬಂದಿದೆ ಎಂದು ಭಾವಿಸಿ ಈ ಹಿಂದೆಯೂ ಕೆಲ ಬಾರಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವಾಂತರ ಸೃಷ್ಟಿಸಿರುವುದು ಕಬ್ಬನ್ ಪಾರ್ಕ್ ಠಾಣಾ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿ ಪರಶುರಾಮ್ 1993ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ. ಆದರೆ ಕಾರಣಾಂತರಗಳಿಂದ ಅಂದು ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಸರ್ಕಾರ ತಡೆ ಹಿಡಿದಿತ್ತು. ಹೀಗಾಗಿ ಪರಶುರಾಮನ ಸರ್ಕಾರಿ ಕೆಲಸದ ಕನಸು ಭಗ್ನವಾಗಿತ್ತು. ಅಂದು ಸರ್ಕಾರ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದರೆ ತಾನೂ ಸಹ ಕೆಪಿಎಸ್‌ಸಿ ಅಧಿಕಾರಿಯಾಗಿರುತ್ತಿದ್ದೆ ಎಂದು ಸರ್ಕಾರದ ವಿರುದ್ಧ ದ್ವೇಷ ಹೊಂದಿದ್ದಾನೆ. ಇದೇ ವಿಷಯಕ್ಕೆ ಹಲವು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಬೇಸತ್ತಿದ್ದಾನೆ.

2017ರ ಫೆಬ್ರವರಿಯಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ನುಗ್ಗಿದ್ದ ಪರಶುರಾಮ್, ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದ. ಮತ್ತೊಮ್ಮೆ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದಾಗ ಪಟಾಕಿ ಸಿಡಿಸಿ ಆತಂಕಕ್ಕೆ ಕಾರಣವಾಗಿದ್ದ. ಶುಕ್ರವಾರ ಸಹ ಪತ್ರಿಕೆಯೊಂದರ ಪ್ರತಿನಿಧಿಯ ಹೆಸರಿನಲ್ಲಿ ಕಾರ್ಯಕ್ರಮಕ್ಕೆ ಪ್ರವೇಶದ ಪಾಸ್ ಪಡೆದುಕೊಂಡಿದ್ದ ಪರಶುರಾಮ್, ಮೈಸೂರಿನಿಂದ ರೈಲಿನಲ್ಲಿ ಬಂದು ಸಿಎಂ ಗಮನ ಸೆಳೆಯಲು ಪ್ಲೇಕಾರ್ಡ್ ಪ್ರದರ್ಶಿಸಿದ್ದ. ಗಮನ ಸೆಳೆಯಲು ವಿಫಲವಾದಾಗ ಮೈದಾನಕ್ಕೆ ನುಗ್ಗಿದ್ದ.

ಪ್ರಸ್ತುತ 62 ವರ್ಷ ವಯಸ್ಸಿನ ಪರಶುರಾಮ್, ''ನನಗೆ ನ್ಯಾಯ ಬೇಕು, ಇಲ್ಲ ಪರಿಹಾರ ಕೊಡಿಸಿ'' ಎಂದು ಪೊಲೀಸರ ಮುಂದೆ ಕೇಳಿಕೊಂಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಭದ್ರತಾ ಉಲ್ಲಂಘನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಹೆಸರು ಪ್ರಾಥಮಿಕವಾಗಿ ಪುರುಷೋತ್ತಮ ಎಂದೇ ತಿಳಿದು ಬಂದಿತ್ತು. ಆದರೆ ಈ ಹಿಂದೆ ಆತನ ವಿರುದ್ಧ ದಾಖಲಾದ ಪ್ರಕರಣಗಳ ಆಧಾರದಲ್ಲಿ ಗಮನಿಸಿದಾಗ ಆತನ ಹೆಸರು ಪರಶುರಾಮ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ :ಪ್ರಕಟವಾಗದ ಕೆಪಿಎಸ್‌ಸಿ ಫಲಿತಾಂಶ: ಪರೇಡ್ ಮಧ್ಯೆ ಮೈದಾನಕ್ಕೆ ನುಗ್ಗಿ ವ್ಯಕ್ತಿಯ ಆಕ್ರೋಶ

ABOUT THE AUTHOR

...view details