ಕರ್ನಾಟಕ

karnataka

ETV Bharat / state

ಕೆಪಿಎಸ್‌ಸಿ ಮರು ಪರೀಕ್ಷೆಗೆ ಆದೇಶಿಸಿದ ಸಿಎಂ ನಿರ್ಧಾರ ಸ್ವಾಗತಿಸಿದ ಅಭ್ಯರ್ಥಿಗಳು - KPSC re examination - KPSC RE EXAMINATION

ಸಿಎಂ ಸಿದ್ದರಾಮಯ್ಯ ಅವರು ಕೆಪಿಎಸ್​ಸಿ ಮರುಪರೀಕ್ಷೆಗೆ ಆದೇಶಿಸಿರುವುದನ್ನು ಪರೀಕ್ಷಾ ಅಭ್ಯರ್ಥಿಗಳು ಸ್ವಾಗತಿಸಿದ್ದಾರೆ. ನೂರಾರು ಅಭ್ಯರ್ಥಿಗಳು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಎಂಗೆ ಧನ್ಯವಾದ ಸೂಚಿಸಿದ್ದಾರೆ.

candidates-welcome-cms-decision-to-order-kpsc-re-examination
ಕೆಪಿಎಸ್‌ಸಿ ಮರು ಪರೀಕ್ಷೆಗೆ ಆದೇಶಿಸಿದ ಸಿಎಂ ನಿರ್ಧಾರ ಸ್ವಾಗತಿಸಿದ ಅಭ್ಯರ್ಥಿಗಳು (ETV Bharat)

By ETV Bharat Karnataka Team

Published : Sep 2, 2024, 7:02 PM IST

ಕೆಪಿಎಸ್​ಸಿ ಮರುಪರೀಕ್ಷೆಗೆ ಸಿಎಂ ಆದೇಶಿಸಿರುವ ಬಗ್ಗೆ ಅಭ್ಯರ್ಥಿಗಳು ಧನ್ಯವಾದ ತಿಳಿಸಿದ್ದಾರೆ (ETV Bharat)

ಬೆಂಗಳೂರು : ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನ ಅಭ್ಯರ್ಥಿಗಳು ಸ್ವಾಗತಿಸಿದ್ದಾರೆ. ಕೆಪಿಎಸ್‌ಸಿ ವಿರುದ್ಧ ನಗರದ ಫ್ರೀಡಂ ಪಾರ್ಕ್​ನಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದ ನೂರಾರು ಜನ ಅಭ್ಯರ್ಥಿಗಳು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಧನ್ಯವಾದ ಸೂಚಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ. ಎ ನಾರಾಯಣಗೌಡ ಮಾತನಾಡಿ, ''ಮುಖ್ಯಮಂತ್ರಿಗಳು ಮರು ಪರೀಕ್ಷೆಯ ನಿರ್ಧಾರ ಮಾಡಿರುವುದು ಖುಷಿ ತಂದಿದೆ. ನಮ್ಮ ಮಕ್ಕಳಿಗೆ ಅನ್ಯಾಯ ಮಾಡಬಾರದು. ಮರು ಪರೀಕ್ಷೆ ನಿರ್ಧಾರ ಒಳ್ಳೆಯದು. ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲಿರುವ ಭ್ರಷ್ಟ ಅಧಿಕಾರಿಗಳನ್ನ ಕಿತ್ತೊಗೆಯಬೇಕು. ಕನ್ನಡ ನಾಡು, ನುಡಿ ವಿಚಾರ ಬಂದಾಗ ಸಿದ್ದರಾಮಯ್ಯ ಅವರು ಸ್ಪಂದಿಸುತ್ತಾ ಬಂದಿದ್ದಾರೆ. ಈಗಲೂ ಸಹ ನಮ್ಮ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ'' ಎಂದರು.

ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಭಾಷಾಂತರ ದೋಷ ಗೊಂದಲಕ್ಕೆ ಕಾರಣವಾಗಿತ್ತು. ಇಂಗ್ಲಿಷ್ ಪ್ರಶ್ನೆಗಳನ್ನು ಎಐ ತಂತ್ರಜ್ಞಾನದ ಮೂಲಕ ಭಾಷಾಂತರ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ದೋಷಪೂರಿತ ಭಾಷಾಂತರದ ಪ್ರಶ್ನೆಗಳು ಅರ್ಥವಾಗದಿದ್ದರಿಂದ ಕೆಲವರು ಇಂಗ್ಲಿಷ್ ಪ್ರಶ್ನೆಗಳನ್ನು ಓದಿ ಉತ್ತರವನ್ನ ಬರೆದ ಪ್ರಸಂಗ ನಡೆದಿತ್ತು. ಈ ಬಗ್ಗೆ ಗ್ರಾಮೀಣ ಭಾಗದ ಅಭ್ಯರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಪಿಎಸ್‌ಸಿ ಯಡವಟ್ಟಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಮರು ಪರೀಕ್ಷೆ ನಡೆಸುವಂತೆ ಬೇಡಿಕೆಯಿಟ್ಟಿದ್ದರು.

ಇದನ್ನೂ ಓದಿ :ಕೆಪಿಎಸ್​​ಸಿ ಪೂರ್ವಭಾವಿ ಪರೀಕ್ಷೆ ಗೊಂದಲ: ಮರುಪರೀಕ್ಷೆ ನಡೆಸಲು ಸಿಎಂ ಸೂಚನೆ - KPSC EXAM ISSUE

ಬಿಜೆಪಿಯಿಂದ ಸ್ವಾಗತ: ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಘೋರ ಲೋಪಗಳನ್ನ ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮರುಪರೀಕ್ಷೆಯನ್ನ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡುವುದು, ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡುವುದು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನ ಪರಿಗಣಿಸಿ ಈ ಹಿಂದೆ ಆದ ತಪ್ಪುಗಳು, ಲೋಪದೋಷಗಳು ಮರುಕಳಿಸದಂತೆ ಅತ್ಯಂತ ಜಾಗರೂಕತೆಯಿಂದ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ನಿರ್ಧಾರ ಸ್ವಾತಿಸಿದ ವಿಜಯೇಂದ್ರ:ಕೆಪಿಎಸ್​ಸಿ ಪರೀಕ್ಷೆಯಲ್ಲಿ ಆದ ಲೋಪವನ್ನು ಎತ್ತಿ ಹಿಡಿದ ರಾಜ್ಯ ಬಿಜೆಪಿ ಆಗ್ರಹಕ್ಕೆ ಮಣಿದು ಪರೀಕ್ಷಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮರು ಪರೀಕ್ಷೆಗೆ ಆದೇಶಿಸಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಾಗತಿಸಿದ್ದಾರೆ.

ಕೆಪಿಎಸ್​ಸಿಯೇ ಶುಲ್ಕ ಭರಿಸಬೇಕು: ಕೆಎಎಸ್‌ ಪರೀಕ್ಷೆ ಮುಂದೂಡಿ ಎಂದು ಅಭ್ಯರ್ಥಿಗಳು ತಿಂಗಳುಗಳ ಕಾಲ ಹೋರಾಟ ನಡೆಸಿದಾಗ ಭಂಡತನಕ್ಕೆ ಬಿದ್ದು ಪರೀಕ್ಷೆ ನಡೆಸಿ ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಪೋಲು ಮಾಡಿದ್ದೀರಿ ಎಂದು ಬಿಜೆಪಿ ಎಕ್ಸ್​ನಲ್ಲಿ ಟೀಕಿಸಿದೆ.

ABOUT THE AUTHOR

...view details