ಬಿಜೆಪಿ ಕಾರ್ಯಕರ್ತರೊಡನೆ ಟೀ ಕುಡಿದು ಮತಬೇಟೆಗೆ ಇಳಿದ ಯದುವೀರ್ ಒಡೆಯರ್ ಮೈಸೂರು:ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಯದುವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿ ಕಾರ್ಯಕರ್ತರೊಡನೆ ಟೀ ಕುಡಿಯುವ ಮೂಲಕ, ಮತಬೇಟೆಗೆ ಇಳಿದಿದ್ದಾರೆ.
ಹೌದು, ಲೋಕಸಭೆ ಚುನಾವಣೆ ಅಭ್ಯರ್ಥಿಯಾದ ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿದ ಯದುವೀರ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ಕಚೇರಿಯಲ್ಲಿಯೇ ಮುಖಂಡರನ್ನು ಪರಿಚಯ ಮಾಡಿಕೊಂಡರು. ಬಳಿಕ ಅಲ್ಲಿಯೇ ಸಮೀಪ ಇರುವ, ಹೋಟೆಲ್ಗೆ ತೆರಳಿ ಕಾರ್ಯಕರ್ತರೊಡನೆ ಟೀ ಕುಡಿದು ಚರ್ಚಿಸಿದರು. ಈ ಮೂಲಕ ಸಾಮಾನ್ಯ ಜನರ ಜೊತೆಯಲ್ಲೂ ಬೆರೆಯಲು ಸಿದ್ಧನೆಂದು ತೋರಿಸಿದ್ದಾರೆ.
ಇನ್ನು ಮೊದಲ ಬಾರಿಗೆ ಮೈಸೂರು ಬಿಜೆಪಿ ಕಚೇರಿಗೆ ಗುರುವಾರ ಆಗಮಿಸಿದ್ದ ಅಭ್ಯರ್ಥಿ ಯದುವೀರ್, 'ರಾಜಕಾರಣ ದೊಡ್ಡ ಸವಾಲು. ಇದನ್ನು ನಾನು ಗಮನದಲ್ಲಿಟ್ಟುಕೊಂಡೇ ಬಂದಿದ್ದೇನೆ. ಸಾಂಬರಿನಲ್ಲಿ ಮೆಣಸಿನಕಾಯಿ ಸಿಕ್ಕಿದಂತೆ ರಾಜಕಾರಣದಲ್ಲೂ ಟೀಕೆಗಳು ಬರುತ್ತವೆ. ಆದರೆ, ಪ್ರತಿದಿನ ರಾಜಕಾರಣದಲ್ಲಿ ಟೀಕೆಗಳು ಹೆಚ್ಚಿರಬಹುದು. ಅದನ್ನು ಜೀರ್ಣಿಸಿಕೊಳ್ಳಬೇಕು ಹಾಗಾಗಿ ಎಲ್ಲದಕ್ಕೂ ಸಿದ್ಧನಾಗಿ ಬಂದಿದ್ದೇನೆ. ಕಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಬರುವ ಬಗ್ಗೆ ತೀರ್ಮಾನ ಮಾಡಿದ್ದೆ. ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ. ಮೈಸೂರಿನ ಅಭಿವೃದ್ದಿಯ ವಿಚಾರವಾಗಿ ನನ್ನದೇ ಆದ ಕನಸುಗಳು ಇವೆ. ದಕ್ಷಿಣ ಭಾರತದಲ್ಲಿ ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿ ಮಾಡಬೇಕು ಎಂಬ ಆಸೆ ಇದೆ. ಆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ:ರಾಜಕೀಯದ ಸವಾಲುಗಳನ್ನು ಅರಿತುಕೊಂಡೇ ಬಂದಿದ್ದೇನೆ: ಯದುವೀರ್ ಒಡೆಯರ್