ಬೆಳಗಾವಿ:ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಸರ್ಕಾರಕ್ಕೆ ಅಗತ್ಯವಾಗಿ ಬರಬೇಕಾದ ಕೋಟ್ಯಂತರ ರೂ. ವರಮಾನ ವಂಚಿಸಲಾಗುತ್ತಿದ್ದು, ಇದನ್ನು ತಪ್ಪಿಸಲು ದಾಖಲೆಗಳೊಂದಿಗೆ ಪರಿಶೀಲನೆ ನಡೆಸುವ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ ತಿಳಿಸಿದೆ.
ವಿಧಾನಸಭೆಯಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕೆ ವರದಿಯನ್ನು ಮಂಡಿಸಲಾಯಿತು. ಅದರಲ್ಲಿ 12 ಉಪ ನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ 56 ಜಂಟಿ ಅಭಿವೃದ್ಧಿ ಒಡಂಬಡಿಕೆಗಳಲ್ಲಿ ದರಗಳನ್ನು ತಪ್ಪಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ 10.26 ಕೊಟಿ ರೂ. ಮೊತ್ತದಷ್ಟು ಶುಲ್ಕ ಕಡಿಮೆ ಪ್ರಮಾಣದಲ್ಲಿ ವಿಧಿಸುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
50 ವರ್ಷಗಳ ಅವಧಿಗೆ ನೀಡಲಾದ ಗಣಿಗಾರಿಕೆ ಗುತ್ತಿಗೆಗಳನ್ನು 20 ಮತ್ತು 30 ವರ್ಷಗಳ ಅವಧಿಗೆ ಗುತ್ತಿಗೆಯಾಗಿ ಪರಿಗಣಿಸಲಾಗಿದೆ. ಇದರಿಂದ 13.33 ಕೋಟಿ ರೂ.ಗಳಷ್ಟು ಕಡಿಮೆ ಮೊತ್ತ ವಿಧಿಸಲಾಗಿದೆ. ಬೇಗೂರು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಶೇ.5ರ ದರದ ಬದಲು ಕಡಿಮೆ ದರದಲ್ಲಿ ನೋಂದಣಿ ಮಾಡಿದ ಪರಿಣಾಮ 5.38 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಲಾಗಿದೆ.