ಕರ್ನಾಟಕ

karnataka

ETV Bharat / state

ಫೆಬ್ರವರಿ 13ಕ್ಕೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ ; ಗರಿಗೆದರಿದ ಗಡಿಜಿಲ್ಲೆ ಅಭಿವೃದ್ಧಿಯ ನಿರೀಕ್ಷೆ - CABINET MEETING

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ. 13 ರಂದು ಸಂಪುಟ ಸಭೆ ನಡೆಯಲಿದೆ.

Male Mahadeshwara hills
ಮಲೆ ಮಹದೇಶ್ವರ ಬೆಟ್ಟ (ETV Bharat)

By ETV Bharat Karnataka Team

Published : Jan 3, 2025, 6:59 PM IST

ಚಾಮರಾಜನಗರ :ಸಿಎಂ‌ ಸಿದ್ದರಾಮಯ್ಯ ಒಲವಿನ‌ ಜಿಲ್ಲೆಯಲ್ಲಿ ಒಂದಾಗಿರುವ ಗಡಿಜಿಲ್ಲೆ ಚಾಮರಾಜನಗರಕ್ಕೆ 2025ರ ವರ್ಷ ಹಲವು ಅಭಿವೃದ್ಧಿಗಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹೌದು, ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.13 ರಂದು ಸಂಪುಟ ಸಭೆ ನಡೆಯಲಿದ್ದು, ಚಾಮರಾಜನಗರಕ್ಕೆ ಅನುದಾನ, ಅಭಿವೃದ್ಧಿ ಹೊಳೆ ಹರಿಯುವ ನಿರೀಕ್ಷೆ ದಟ್ಟವಾಗಿದೆ.

ಫೆಬ್ರವರಿ 13 ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದು, ಬೆಟ್ಟದಲ್ಲಿ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ಇರುವ ಸುಂದರ ಪರಿಸರದಲ್ಲಿ ಸಂಪುಟ ಸಭೆ ನಡೆಯಲಿದೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿದರು (ETV Bharat)

ಬೆಳಗಾವಿ, ಕಲಬುರಗಿ ನಂತರ ಇದೇ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಪರಿಪೂರ್ಣ ಸಚಿವ ಸಂಪುಟ ಸಭೆ ನಡೆಯಲಿದ್ದು, ಗಿರಿಜನರಿಗೆ ವಸತಿ ಸೇರಿದಂತೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಆಗುವ ನಿರೀಕ್ಷೆ ಇದೆ.

ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ಮೂಲಸೌಕರ್ಯ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ತಯಾರು ಮಾಡಿಕೊಳ್ಳುತ್ತಿದ್ದೇವೆ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸಂಪೂರ್ಣ ಒಳಚರಂಡಿ ವ್ಯವಸ್ಥೆ, ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಯೋಜನೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ‌‌. ಗ್ರಾಮಾಂತರ ಮತ್ತು ನಗರ, ಪಟ್ಟಣ ಪ್ರದೇಶಗಳಿಗೆ ಪರಿಪೂರ್ಣ ಮೂಲಸೌಕರ್ಯ ಸಿಗುವುದರ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದರು.

ಎಸ್ಎಂಕೆ ಅವಧಿಯಲ್ಲಿ ನಡೆದಿತ್ತು ಮಿನಿ ಸಂಪುಟ ಸಭೆ :ಎಸ್. ಎಂ ಕೃಷ್ಣ ಸಿಎಂ ಆಗಿದ್ದ ಹೊತ್ತಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಎಸ್ಎಂಕೆ ಮಿನಿ ಸಂಪುಟ ಸಭೆ ನಡೆಸಿದ್ದರು‌. ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರ ಸಭೆ ನಡೆಸಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದರು.

ಒಟ್ಟಿನಲ್ಲಿ ಗಡಿಜಿಲ್ಲೆ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ತೊಡೆದುಹಾಕಿದ್ದ ಸಿಎಂ ಸಿದ್ದರಾಮಯ್ಯ ಈಗ ಸಂಪುಟ ಸಭೆ ನಡೆಸಿ ವಿಶೇಷ ಪ್ಯಾಕೇಜ್, ವಿಶೇಷ ಯೋಜನೆ ಮೂಲಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲಿ ಎಂಬುದೇ ಎಲ್ಲರ ಒತ್ತಾಸೆ.

ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿನ ಪ್ರಮುಖ ತೀರ್ಮಾನಗಳೇನು? - CABINET MEETING

ABOUT THE AUTHOR

...view details