ಬೆಂಗಳೂರು:ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರಕರಣ ಇದೀಗ ರಾಜಭವನದ ಕದ ತಟ್ಟಿದೆ.
ಇತ್ತೀಚೆಗೆ ಬಿಜೆಪಿ ನಿಯೋಗವು ತೆರಳಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿತ್ತು. ಇದೀಗ ಮತ್ತೆ ಇಂದು ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಇತರ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ದೂರು ನೀಡಿ, ಬೆಳಗಾವಿಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ದಿಕ್ಕು ತಪ್ಪಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರಿಗೆ ದೂರು ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ.ರವಿ, ''ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಹತ್ಯೆ ಹಾಗೂ ಆತ್ಮಹತ್ಯೆಗಳ ರಾಜ್ಯವನ್ನಾಗಿ ಮಾಡಿದೆ. ಜೊತೆಗೆ ಇಬ್ಬಗೆ ನೀತಿ ಅನುಸರಿಸುತ್ತಿದೆ'' ಎಂದು ಕಿಡಿಕಾರಿದರು.
ರಾಜ್ಯಪಾಲರಿಗೆ ದೂರು ನೀಡಿದ ಸಿ.ಟಿ.ರವಿ, ಇತರರು (ETV Bharat) ಎನ್ಕೌಂಟರ್ ಮಾಡುವ ದುರುದ್ದೇಶ:''ನನ್ನ ವಿರುದ್ಧ ದೂರು ದಾಖಲಾದ ತಕ್ಷಣ ಬಂಧಿಸಲಾಯಿತು. ಇಡೀ ರಾತ್ರಿ ಓಡಾಡಿಸಿ ನಿರ್ಜನ ಪ್ರದೇಶದಲ್ಲಿ ಎನ್ಕೌಂಟರ್ ಮಾಡಿ ಮುಗಿಸುವ ದುರುದ್ದೇಶವೂ ಸರ್ಕಾರಕ್ಕಿತ್ತು. ಆದರೆ, ಪೊಲೀಸ್ ವ್ಯಾನ್ಗಳನ್ನು ಮಾಧ್ಯಮಗಳ ವಾಹನಗಳು ಹಿಂಬಾಲಿಸುತ್ತಿದ್ದ ಕಾರಣ ಅದು ಸಫಲವಾಗಲಿಲ್ಲ'' ಎಂದು ಆರೋಪಿಸಿದರು.
ಇದಕ್ಕೂ ಮೊದಲು ವಿಧಾನಸೌಧದಕ್ಕೆ ತೆರಳಿದ ಸಿ.ಟಿ.ರವಿ ಅವರು, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ಭೇಟಿಯಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಪ್ರಕರಣದ ಕುರಿತು ಚರ್ಚೆ ನಡೆಸಿದರು.
ನನ್ನ ದೂರು ದಾಖಲಿಸಿಲ್ಲ:ಪರಿಷತ್ ಕಾರ್ಯದರ್ಶಿ ಅವರನ್ನು ಭೇಟಿ ಬಳಿಕ ಮಾತನಾಡಿದ ಸಿ.ಟಿ.ರವಿ ಅವರು, ''ಸದನದೊಳಗೆ ನಡೆದಿರುವುದರಿಂದ ಸಭಾಪತಿ ಅವರ ವ್ಯಾಪ್ತಿಗೆ ಬರುತ್ತದೆ. ಅನುಮತಿ ಇಲ್ಲದೇ ಮೊಕದ್ದಮೆ ದಾಖಲು ಮಾಡಿದ್ದು ತಪ್ಪು. ಈಗ ಎಫ್ಎಸ್ಎಲ್ಗೆ ಕಳಿಸುತ್ತೇನೆ ಅಂತಿದ್ದಾರೆ. ದುರುದ್ದೇಶದಿಂದ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಸದ್ದಾಂ ಮತ್ತು ಸಂಗಂ ಎಂಬವರು ನನ್ನ ಕಾರಿನ ಮೇಲೆ ಅಟ್ಯಾಕ್ ಮಾಡಿದರು. ನಮ್ಮ ಜೊತೆ ಇದ್ದ ಕಿಶೋರ್ ಪುತ್ತೂರು ಸಭಾಪತಿ ಅವರಿಗೆ ದೂರು ನೀಡಿದ್ದಾರೆ. ಅವರನ್ನು ಅರೆಸ್ಟ್ ಮಾಡಿದರು. ಆದರೆ, ಅವರನ್ನು ಬಿಟ್ಟು ಕಳಿಸಿದ್ದಾರೆ. ನಾನು ಹೆಸರು ಹಾಕಿ ಕೊಟ್ಟರೂ ದೂರು ದಾಖಲಿಸಿಲ್ಲ'' ಎಂದು ಆರೋಪಿಸಿದರು.
ಡಿಜಿಪಿಗೂ ದೂರು ನೀಡುವೆ:''ನನ್ನನ್ನು ಕಿಡ್ನಾಪ್ ಮಾಡಿ ನಿಗೂಢ ಸ್ಥಳಗಳಿಗೆ ಕರೆದುಕೊಡು ಹೋಗಿದ್ದರು. ನನ್ನ ಫೇಕ್ ಎನ್ಕೌಂಟರ್ ಮಾಡಲು ಕರೆದುಕೊಂಡು ಹೋಗಿದ್ದರು. ಸಭಾಪತಿ ಅವರಿಗೆ ನನ್ನ ಮೇಲಿನ ದೌರ್ಜನ್ಯ, ಹಕ್ಕು ಚ್ಯುತಿ ಬಗ್ಗೆ ದೂರು ನೀಡಿದ್ದೇನೆ. ಮಂತ್ರಿಗಳೇ ಆರೋಪಿತ ಸ್ಥಾನದಲ್ಲಿ ಇದ್ದಾರೆ. ಬೆಳಗಾವಿ ಚಲೋ ಬಗ್ಗೆ ಪಕ್ಷ ನಿರ್ಧರಿಸಲಿದೆ. ನಾನು ಬೆಳಗಾವಿಗೆ ಹೋಗುತ್ತೇನೆ. ಅದೇನು ನಿಷೇಧಿತ ಪ್ರದೇಶ ಅಲ್ಲವಲ್ಲ?. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಕ್ಕೆ ಹೋಗುತ್ತೇನೆ. ನನ್ನ ಬಂಧನ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಆಗಬೇಕು. ಈ ಬಗ್ಗೆ ಡಿಜಿಪಿ ಅವರಿಗೂ ದೂರು ಕೊಡುತ್ತೇನೆ'' ಎಂದು ಹೇಳಿದರು.
ಇದನ್ನೂ ಓದಿ:ಸಿ ಟಿ ರವಿ, ಲಕ್ಷ್ಮಿ ಹೆಬ್ಬಾಳ್ಕರ್ ಗಲಾಟೆ ಪ್ರಕರಣ : ಸರ್ಕಾರ ಸಿಬಿಐಗೆ ಕೊಡುತ್ತೊ ಎಲ್ಲಿಗೆ ಕೊಡುತ್ತೊ ನಂಗೆ ಗೊತ್ತಿಲ್ಲ- ಬಸವರಾಜ ಹೊರಟ್ಟಿ