ಮಂಗಳೂರು:ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅ.21ರಂದು ಉಪ ಚುನಾವಣೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗು ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಸೆ.26ರಿಂದ ಅ.3ರವರೆಗೆ ಅವಕಾಶವಿದೆ. ಅ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.7ರಂದು ನಾಮಪತ್ರ ವಾಪಸ್‌ಗೆ ಕೊನೆ ದಿನ. ಅ.21ರಂದು ಬೆಳಗ್ಗೆ 8ರಿಂದ ಸಂಜೆ 4ಗಂಟೆವರೆಗೆ ಮತದಾನ ಹಾಗೂ ಅ.24ರಂದು ಮತ ಎಣಿಕೆ ನಡೆಯಲಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯ 392 ಸ್ಥಳೀಯಾಡಳಿತಗಳ 6,037 ಮಂದಿ ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದರು.
ನೀತಿ ಸಂಹಿತೆ ಜಾರಿ:ಚುನಾವಣೆ ಪೋಷಣೆಯಾದ ದಿನವಾದ ಸೆ.19ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಅ.28ರ ವರೆಗೆ ದ.ಕ./ಉಡುಪಿ ಜಿಲ್ಲೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಸರ್ಕಾರದ ಯಾವುದೇ ಅಭಿವೃದ್ಧಿಪರ ಕಾರ್ಯಗಳ ಘೋಷಣೆ ಮಾಡುವಂತಿಲ್ಲ. ಗುದ್ದಲಿ ಪೂಜೆ, ಶಿಲಾನ್ಯಾಸ ನಡೆಸುವಂತಿಲ್ಲ. ಶುಭಾಶಯ ಕೋರಿ ರಾಜಕೀಯ ನಾಯಕರ, ಅಭ್ಯರ್ಥಿಗಳ ಬ್ಯಾನರ್ ಅಳವಡಿಸುವಂತಿಲ್ಲ. ಅಧಿಕಾರಿಗಳು ಕಾರ್ಯಕ್ರಮ ಯಾವುದೇ ಸರ್ಕಾರಿ ಹಾಗೂ ಸಭೆಗಳಿಗೆ ಹಾಜರಾಗುವಂತಿಲ್ಲ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳ ಮೇಲೆ ಆಯೋಗ ನಿಗಾ ವಹಿಸಲಿದೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಮಾದರಿಯಲ್ಲೇ ನಿಯಮಾವಳಿ ಈ ಉಪ ಚುನಾವಣೆಗೂ ಅನ್ವಯಿಸಲಿದೆ. ಸಹಾಯಕ ಚುನಾವಣಾಧಿಕಾರಿಗಳಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.