ಶಿವಮೊಗ್ಗ: "ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಮೊನ್ನೆ ನಡೆದ ಔತಣಕೂಟವು ಸಿಎಂ ಸಿದ್ದರಾಮಯ್ಯ ಅವರ ಪ್ರಾಯೋಜಿತ ಔತಣಕೂಟ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಔತಣಕೂಟ ಸಾಮಾನ್ಯವಾಗಿ ನಡೆದಿಲ್ಲ. ಡಿ.ಕೆ. ಶಿವಕುಮಾರ್ ಅವರು ವಿದೇಶಕ್ಕೆ ಹೋದಾಗ ನಡೆದಿರುವುದು ಗಮನಿಸಬೇಕಾದ ಅಂಶವಾಗಿದೆ. ಮುಡಾ ಹಗರಣದಲ್ಲಿ ಸೈಟ್ ಯಾಕೆ ವಾಪಸ್ ನೀಡಬೇಕು ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ, ಆ ಬಳಿಕ ಸೈಟ್ ವಾಪಸ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು".
ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ (ETV Bharat) "62 ಕೋಟಿ ಕೊಟ್ಟರೆ ಸೈಟ್ ವಾಪಾಸ್ ನೀಡುವುದಾಗಿ ಹೇಳುತ್ತಿದ್ದ ಸಿದ್ದರಾಮಯ್ಯ, ನಮ್ಮ ಪಾದಯಾತ್ರೆ ಹೋರಾಟದಿಂದ ವಾಪಸ್ ನೀಡಬೇಕಾಯಿತು" ಎಂದರು.
"ನಾನು ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದಾಗ ವಿಜಯೇಂದ್ರ ಭವಿಷ್ಯ ಹೇಳ್ತಾರಾ ಎಂದು ಸಿದ್ದರಾಮಯ್ಯ ಹೇಳಿದ್ರು, ನಾನು ಹೇಳಿದ್ದು ಏನು ಎಂದು ಮುಂದೆ ಗೂತ್ತಾಗುತ್ತದೆ. ಔತಣಕೂಟದಿಂದ ಎಲ್ಲವು ಸರಿ ಇಲ್ಲ ಎಂದು ತಿಳಿದು ಬರುತ್ತದೆ ಎಂದರು. ಸಿದ್ದುರಾಮಯ್ಯ ಬಜೆಟ್ ನಂತರ ರಾಜೀನಾಮೆ ನೀಡುತ್ತಾರೆ ಎಂಬ ಅಂಶ ಚರ್ಚೆಗೆ ಬಂದಿದೆ. ಇದರಿಂದ ಔತಣಕೂಟದ ಮೂಲಕ ತಮ್ಮ ರಾಜಕೀಯ ದಾಳ ಬಿಟ್ಟಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡಲು ತಯಾರಿಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಮುಂದುವರೆಸಲು ಅವರ ವಿರೋಧಿ ತಂಡ ಬಿಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದು v/s ಯುದ್ದ ಎಂಬಾಂತೆ ಆಗಿದೆ" ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಸರಣಿ ಆತ್ಮಹತ್ಯೆ ಭಾಗ್ಯ ನೀಡಿದೆ: "ಸರ್ಕಾರ ಬಂದ ಮೇಲೆ ಸರಣಿ ಆತ್ಮಹತ್ಯೆ ಭಾಗ್ಯವನ್ನು ಸರ್ಕಾರ ನೀಡಿದೆ. ನಮ್ಮ ಜಿಲ್ಲೆಯಲ್ಲಿ ಚಂದ್ರಶೇಖರ್, ದಾವಣಗೆರೆ, ಬೆಳಗಾವಿಯಲ್ಲಿ ಎಸ್ಡಿಎ ರುದ್ರಣ್ಣ, ಮೊನ್ನೆ ಯಾದಗಿರಿ ಜಿಲ್ಲೆಯಲ್ಲಿ ಪರಶುರಾಮ ಎಂಬ ಪಿಎಸ್ಐ ಆತ್ಮಹತ್ಯೆ, ಗುಲ್ಬರ್ಗ ಜಿಲ್ಲೆಯಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಣಿ ಆತ್ಮಹತ್ಯೆ ಬಗ್ಗೆ ರಾಜ್ಯದಲ್ಲಿ ಅಷ್ಟೆ ಅಲ್ಲ ದೇಶದಲ್ಲಿ ಚರ್ಚೆ ನಡೆಯುತ್ತಿದೆ" ಎಂದರು.
ರಾಜ್ಯ ಸರ್ಕಾರದ ಸಾಧನೆ ಶೂನ್ಯ: "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಸಾಧನೆ ಏನೂ ಅಂತ ಸಿಎಂ ಹಾಗೂ ಮಂತ್ರಿಗಳೇ ಹೇಳಬೇಕು. ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು, ಶಂಕುಸ್ಥಾಪನೆ ನೋಡಲು ಸಾಧ್ಯವಿಲ್ಲ. ಇದನ್ನು ನಾವಲ್ಲಾ, ಆಡಳಿತ ಪಕ್ಷದ ಶಾಸಕರೇ ರಾಜು ಕಾಗೆ , ಆರ್.ವಿ. ದೇಶಪಾಂಡೆ ಅವರೇ ಹೇಳುತ್ತಿದ್ದಾರೆ. ಮೊದಲ ಭಾರಿ ಗೆದ್ದ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಾದ ಸ್ಥಿತಿ ನಿರ್ಮಾಣವಾಗಿದೆ" ಎಂದು ಟೀಕಿಸಿದರು.
ಶಿಕಾರಿಪುರಕ್ಕೆ ಬಂದ ಕಾರಣ ಕಲಬುರಗಿ ಪ್ರತಿಭಟನೆಗೆ ಹೋಗಲ್ಲ: "ಇಂದು ಕಲಬುರಗಿಯಲ್ಲಿ ಸಚಿನ್ ಪಂಚಾಳ ಅವರ ಆತ್ಮಹತ್ಯೆ ಖಂಡಿಸಿ ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆಯನ್ನು ನಮ್ಮ ಪಕ್ಷದಿಂದ ನಡೆಸಲಾಗುತ್ತಿದೆ. ಶಿಕಾರಿಪುರದಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರಾದ ಹೆಚ್.ಟಿ. ಬಳಿಗಾರ್ ಅವರು ನಿಧನರಾಗಿದ್ದ ಕಾರಣಕ್ಕೆ ನಾನು ಶಿಕಾರಿಪುರಕ್ಕೆ ಬಂದಿರುವೆ. ಈ ಕಾರಣದಿಂದಾಗಿಯೇ ಪ್ರತಿಭಟನೆಗೆ ಹೋಗಲು ಆಗಲಿಲ್ಲ. ನಮ್ಮ ಪಕ್ಷದ ನಾಯಕರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ"ಎಂದರು.
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: " ರಾಜು ಕಪ್ಪನೂರ ಅವರ ಕಾಟದಿಂದಲೇ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಆಗಿದೆ ಎಂದು ಡೆತ್ನೋಟ್ನಲ್ಲಿದೆ. ಸಚಿನ್ ಪಾಂಚಾಳ್ ಅವರ ಕುಟುಂಬದವರಿಗೆ ಸ್ಥಳೀಯ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಅವರಿಂದ ನಿಪಕ್ಷಪಾತವಾದ ತನಿಖೆ ನಡೆಯುವುದಿಲ್ಲ. ಇದರಿಂದ ಅವರ ಕುಟುಂಬ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಪ್ರಿಯಾಂಕ್ ಖರ್ಗೆ ಅವರು ಭಾರಿ ಮಾತನಾಡುತ್ತಿದ್ದಾರೆ. ಸಿಬಿಐ ತನಿಖೆ ನಡೆಸಬೇಕೆಂದು ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ" ಎಂದು ಹೇಳಿದರು.
ಸಿಬಿಐ ತನಿಖೆ ನಡೆದರೆ ಪ್ರಿಯಾಂಕ್ ಖರ್ಗೆ ಸೇಫ್: "ನಾನು ಶಾಸಕ ಮಿತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಸಲಹೆ ನೀಡುತ್ತಿದ್ದೇನೆ. ಸಚಿನ್ ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲ ಎಂದು ಹೇಳುವುದಾದರೆ, ನೀವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೇಳುವುದು ಸೂಕ್ತವಾಗಿದೆ. ಹಿಂದೆ ಗಣಪತಿ ಆತ್ಮಹತ್ಯೆ ಕೇಸ್ನಲ್ಲಿ ಜಾರ್ಜ್ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಿ ಮತ್ತೆ ಮಂತ್ರಿ ಸ್ಥಾನಕ್ಕೆ ಬಂದರು. ಪ್ರಿಯಾಂಕ್ ಖರ್ಗೆ ಅವರೇ ನೀವು ಸಿಎಂ ರನ್ನು ನಂಬ ಬೇಡಿ, ಎಸ್ಐಟಿ ರಚನೆ ಮಾಡಿ ನಿಮ್ಮನ್ನು ಸಿಲುಕಿಸುವ ಕೆಲಸ ಮಾಡಬಹುದು. ಇದರಿಂದ ನೀವು ಸಿಬಿಐಗೆ ವಹಿಸಿದರೆ ನೀವು ಸೇಫ್ ಆಗಿರಬಹುದು. ಸಿಐಡಿ ತನಿಖೆ ಮುಗಿಯುವುದಿಲ್ಲ ನೀವು ಪ್ರಾಮಾಣಿಕರಾಗಿ ಹೊರಬರಲ್ಲ. ಸಚಿನ್ ಕುಟುಂಬಕ್ಕೂ ನ್ಯಾಯ ಸಿಗಲ್ಲ".
ಬಾಣಂತಿ ಹಾಗೂ ನವಜಾತ ಶಿಶುಗಳ ಸಾವಿನ ವಿಚಾರ:ನಮ್ಮ ರಾಜ್ಯದಲ್ಲಿ 736 ಬಾಣಂತಿಯರು ಹಾಗೂ ಒಂದು ಸಾವಿರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವು ಸಂಭವಿಸಿದೆ. ಇಲ್ಲಿ ಆರೋಗ್ಯ ಸಚಿವರ ನಿರ್ಲಕ್ಷ್ಯದಿಂದ ಸಾವು ಉಂಟಾಗುತ್ತಿದೆ. ಉಸ್ತುವಾರಿ ಸಚಿವರುಗಳು ಭೇಟಿ ನೀಡಿ ಪರಿಹಾರ ನೀಡುತ್ತಿಲ್ಲ. ಕಪ್ಪು ಪಟ್ಟಿಯ ಔಷಧ ಕಂಪನಿಗಳು ಔಷಧ ಪೂರೈಕೆ ಮಾಡುತ್ತಿರುವುದೇ ಸಾವಿಗೆ ಕಾರಣವಾಗಿದೆ. ಈ ಪ್ರಕರಣದ ಕುರಿತು ಆರೋಗ್ಯ ಸಚಿವರು ನೈತಿಕ ಹೊಣೆ ಹೂತ್ತು ರಾಜೀನಾಮೆ ನೀಡಬೇಕಾಗುತ್ತದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ರಾಜೀನಾಮೆ ನೀಡಬೇಕಾಗುತ್ತದೆ. ಸಿಎಂ ಅವರು ಕನಿಷ್ಟ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಅಗ್ರಹಿಸಿದರು.
ಸಾರಿಗೆ ಇಲಾಖೆಯಲ್ಲಿ ಶೇ 15 ದರ ಹಚ್ಚಳ: "ಶಕ್ತಿ ಯೋಜನೆಯಿಂದ ಸರ್ಕಾರದ ಸಾರಿಗೆ ಸಂಸ್ಥೆ ಕೋಟ್ಯಂತರ ರೂ. ನಷ್ಟದಲ್ಲಿದೆ. ಇದನ್ನು ಸರಿದೂಗಿಸಲು ಶೇ 15 ದರ ಏರಿಕೆ ಮಾಡಿದೆ. ಮಹಿಳೆಯರಿಗೆ ಉಚಿತ, ಪುರುಷರಿಗೆ ಬರೆ ಎಂಬಂತೆ ಆಗಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕಂದು" ವಿಜಯೇಂದ್ರ ಆಗ್ರಹಿಸಿದರು.
ರಾಜ್ಯಾಧ್ಯಕ್ಷನಾಗಿ ರಾಜ್ಯ ಸರ್ಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದೇನೆ: "ನಾನು ರಾಜ್ಯಾಧ್ಯಕ್ಷನಾಗಿ ಒಂದು ವರ್ಷದಲ್ಲಿ ಹೋರಾಟ ಮಾಡಿ, ಸರ್ಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇನೆ. ಒಂದಿಬ್ಬರನ್ನು ಬಿಟ್ಟು ಎಲ್ಲಾ ಹಿರಿಯರನ್ನು ಮಾತನಾಡಿಸಿ, ಮನವೊಲಿಸಿ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ನಡ್ಡಾ ಜೀ, ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಕ್ಷದ ಒಳಗಿನ ಸಮಸ್ಯೆ ಕುರಿತು ತಿಳಿಸಿದ್ದೇನೆ. ಆದಷ್ಟು ಬೇಗ ನಮ್ಮ ಹೈಕಮಾಂಡ್ ಎಲ್ಲವನ್ನು ಪರಿಹರಿಸುತ್ತದೆ ಎಂದರು.
ಯತ್ನಾಳ್ ವಕ್ಫ್ ಹೋರಾಟದ ಕುರಿತು: "ವಕ್ಪ್ ಹೋರಾಟ ಮುಗಿದಿಲ್ಲ ಎಂದು ರಾಜ್ಯಾಧ್ಯಕ್ಷನಾಗಿ ನಾನೇ ಹೇಳಿದ್ದೇನೆ. ಇಲ್ಲಿ ಹೋರಾಟ ಮುಂದುವರೆಯಲಿದೆ" ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತೀರುಗೇಟು ನೀಡಿದರು.
ಇದನ್ನೂ ಓದಿ:ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಆರೋಪಿ ನಿಖಿತಾ ಸಿಂಘಾನಿಯಾ ಜಾಮೀನು ಅರ್ಜಿ ವಿಚಾರಣೆ ಇಂದು