ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಸದಸ್ಯತ್ವ ಹಿನ್ನಡೆಗೆ ಶಾಸಕರು ಕಾರಣವಾಗಿದ್ದು, ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೂ ಬಿಬಿಎಂಪಿ ಚುನಾವಣೆ ಗೆಲ್ಲಲು ಸದಸ್ಯತ್ವ ಸಂಖ್ಯೆ ಹೆಚ್ಚು ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ಜಯನಗರದಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸದಸ್ಯತ್ವ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೆಲ್ಲ ಕಾರಣ ನಗರ ಬಿಜೆಪಿ ಶಾಸಕರು. ಬಿಬಿಎಂಪಿ ಚುನಾವಣೆ ಸಕಾಲದಲ್ಲಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಂದೆ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಜಾತಿ, ಮತ ಭೇದ ಇಲ್ಲದೇ ಎಲ್ಲರೂ ಒಂದೇ ಏನ್ನುವ ಕಾಲವಾಗಿತ್ತು. ಅದರೆ ಇಂದು ಜಾತಿಯ ಮೇಲೆ ರಾಜಕೀಯ ನಡೆಯುತ್ತಿದೆ ಎಂದರು.
ಈದ್ಗಾ ಮೈದಾನ ವಿರುದ್ಧ ಬಿ.ಎಸ್. ಯಡಿಯೂರಪ್ಪ ನಡೆಸಿದ್ದ ಹೋರಾಟಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದು ವಿರೋಧ ಪಕ್ಷದಲ್ಲಿ ಇದ್ದೆವು. ಯಡಿಯೂರಪ್ಪ, ಅನಂತ್ ಕುಮಾರ್ ಮತ್ತು ಕಾರ್ಯಕರ್ತರ ಶ್ರಮದಿಂದ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಎರಡು ಬಾರಿ ಅಧಿಕಾರ ಅನುಭವಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರು ನಗರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಕಾರ್ಯಕರ್ತರ ಮತ್ತು ಮುಖಂಡರ ನಡುವೆ ಉತ್ತಮ ಒಡನಾಟವಿಲ್ಲದ ಕಾರಣ ಮತ್ತು ಸ್ವಹಿತಾಸಕ್ತಿ, ನಾನು ನನ್ನ ಸಂಬಂಧಿಕರು ಮಾತ್ರ ರಾಜಕೀಯ ಅಧಿಕಾರ ಅನುಭವಿಸಬೇಕು ಎಂಬ ದುರಾಸೆಯಿಂದ ಕಾರ್ಯಕರ್ತರು ನಿರಾಸಕ್ತಿ ಹೊಂದಿದ್ದಾರೆ. ಮುಖಂಡರಿಗೆ ಎಷ್ಟು ಗೌರವ ಕೊಡುತ್ತೇವೆಯೋ ಅಷ್ಟೇ ಗೌರವ ಕಾರ್ಯಕರ್ತನಿಗೂ ಕೊಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ ಒಂದು ಚುನಾವಣೆ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದರಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದರು.
ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಶಾಸಕರಾದ ಕೃಷ್ಣಪ್ಪ, ರವಿಸುಬ್ರಮಣ್ಯ ಮತ್ತು ಮಾಜಿ ಮಹಾಪೌರರಾದ ಎಸ್.ಕೆ. ನಟರಾಜ್, ಉಪಾಧ್ಯಕ್ಷರಾದ ಕೆ.ಉಮೇಶ್ ಶೆಟ್ಟಿ, ಬಿಜೆಪಿ ಮುಖಂಡ ರವೀಂದ್ರ, ಹಿಂದುಳಿದ ವರ್ಗದ ಬಿ.ಸೋಮಶೇಖರ್, ತಾರ ಅನುರಾಧ, ಮಂಡಲದ ಅಧ್ಯಕ್ಷರಾದ ವಿಶ್ವನಾಥಗೌಡ, ಟಿ.ವಿ. ಕೃಷ್ಣ ಭಾಗವಹಿಸಿದ್ದರು.
ಇದನ್ನೂ ಓದಿ: ರಾಜ್ಯದ ಮುಜರಾಯಿ ದೇಗುಲಗಳ ಪ್ರಸಾದಕ್ಕೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸಲು ಸರ್ಕಾರದ ಸೂಚನೆ - Nandini Ghee For Temples Prasad