ಬೆಂಗಳೂರು: ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಅಗತ್ಯವಿರುವಷ್ಟು ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಐಟಿ ಕಂಪನಿಗಳ ನೀರಿನ ಕೊರತೆಯನ್ನು ಪರಿಹರಿಸಲಾಗಿದ್ದು, ಕಾವೇರಿ ನೀರಿನ ಬೇಡಿಕೆ ಇಟ್ಟ ಕಂಪನಿಗಳಿಗೆ ಕಾವೇರಿ ನಾಲ್ಕನೇ ಹಂತದ ನೀರನ್ನು ಪೈಪ್‌ಲೈನ್ ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಬುಧವಾರ ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಮಹದೇವಪುರ ಭಾಗದಲ್ಲಿ ನೀರಿನ ಲಭ್ಯತೆ, ಸರಬರಾಜು ಮತ್ತು ಉಳಿತಾಯ ಹಾಗೂ ಮರುಬಳಕೆಗೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಡಾ. ರಾಮ್ ಪ್ರಸಾತ್ ಮನೋಹರ್-"ಮಹದೇಪುರ ವಲಯದಲ್ಲಿ 21 ಐಟಿ ಪಾರ್ಕ್‌ಗಳಿವೆ. ಇಲ್ಲಿ ಬೋರ್ವೇಲ್ಗಳ ಮೇಲೆ ಹೆಚ್ಚಿನ ಅವಲಂಬನೆ ಇದೆ. ನೀರಿನ ಕೊರತೆ ಉಂಟಾಗಿದ್ದನ್ನು ಜಲಮಂಡಳಿ ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಸರಿಪಡಿಸಿದೆ. ಈ ಎಲ್ಲ ಪಾರ್ಕ್‌ಗಳ ಬಳಕೆಗೆ ಸುಮಾರು 12 ಎಂ.ಎಲ್.ಡಿ ಕಾವೇರಿ ನೀರಿನ ಅವಶ್ಯಕತೆ ಬೀಳುತ್ತದೆ. ಇದರಲ್ಲಿ ಸದ್ಯ ಲಭ್ಯವಿರುವ ಕಾವೇರಿ 4 ನೇ ಹಂತದ ಯೋಜನೆಯಲ್ಲೇ ಸುಮಾರು 5 ಎಂ.ಎಲ್.ಡಿ ನೀರನ್ನು ನೀಡಬಹುದಾಗಿದೆ.
ಆದರೆ, ಇದಕ್ಕೆ ತಗಲುವ ಪ್ರೋರೇಟಾ ಹಾಗೂ ಇನ್ನಿತರ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಶುಲ್ಕ ಭರಿಸಿದರೆ 30 ದಿನಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ಪ್ರಾರಂಭಿಸಬಹುದಾಗಿದೆ. ಕಾವೇರಿ 5 ನೇ ಹಂತದ ಯೋಜನೆ ಜಾರಿಗೊಂಡ ನಂತರ ಹೆಚ್ಚಿನ ಪ್ರಮಾಣದ ನೀರು ಒದಗಿಸಬಹುದಾಗಿದೆ. ಅಲ್ಲದೇ, ಇನ್ನುಳಿದ ಬೇಡಿಕೆಯನ್ನು ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ಮೂಲಕ ಈಡೇರಿಸಲಾಗುವುದು".