ಬೆಂಗಳೂರು:ನಗರದಲ್ಲಿ ಈ ಬಾರಿ ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಅನೇಕ ಕಾರಣಗಳಿಂದ ಫೆಬ್ರವರಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳಿಗೆ ಜಲಮಂಡಳಿ ಕುಡಿಯುವ ನೀರನ್ನು ಸರಬರಾಜು ಮಾಡಲು ಮುಂದಾಗಿದೆ.
ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಬೇಸಿಗೆ ಆರಂಭವಾಗುವ ಮುನ್ನವೇ ಸಮಸ್ಯೆ ತಲೆದೋರಿದೆ. ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿದ್ದು, ನೀರಿನ ಕೊರತೆ ಎದುರಾಗಿದೆ. ಈ ಪ್ರದೇಶಗಳಿಗೆ ಜಲಮಂಡಳಿಯ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲು ಮುಂದಾಗಿದ್ದು, 86 ಟ್ಯಾಂಕರ್ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಲ್ಲಿ 51 ಗ್ರಾಮಗಳಿಗೆ ಸಹ ನೀರಿನ ಸರಬರಾಜು ಮಾಡಲು ಜಲಮಂಡಳಿ ಸಜ್ಜಾಗಿದೆ.
ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಜೂನ್‌ವರೆಗೆ ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸುವಷ್ಟು ನೀರಿದೆ. ಹೀಗಾಗಿ ಜಲಮಂಡಳಿಯು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಬಿಬಿಎಂಪಿ ಮಿತಿಯಲ್ಲಿರುವ 51 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆ ಮಾಡುತ್ತಿದೆ. ಸಮಸ್ಯೆಗಳಿದ್ದ ಕಡೆ ಟ್ಯಾಂಕರ್ಗಳನ್ನು ಸಹ ಬಳಸಲು ಮುಂದಾಗಿದ್ದೇವೆ. ಟ್ಯಾಂಕರ್ಗಳಿಂದ 6,000 ಲೀಟರ್ ನೀರು ಪೂರೈಕೆ ಮಾಡಬಹುದಾಗಿದ್ದು, ಇದರ ಹೊರತಾಗಿ ಬೇಸಿಗೆಯ ತಿಂಗಳುಗಳಲ್ಲಿ ನಿವಾಸಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬೋರ್‌ವೆಲ್‌ಗಳ ಸೇವೆ ಮತ್ತು ದುರಸ್ತಿಗಾಗಿ ತಂಡವನ್ನು ರಚಿಸಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.