ಬೆಂಗಳೂರು: ನಗರದ ಕೆಲವೊಂದು ಭಾಗಗಳಲ್ಲಿ ನೀರಿನ ಕೊರತೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಲವು ಪರಿಹಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿರುವ ಗ್ರಾಹಕರಿಗೆ ನೀರು ಕಡಿತಗೊಳಿಸಲು ಮುಂದಾಗಿದೆ. ಇದರಿಂದ ಪ್ರತಿನಿತ್ಯ 60 ಎಂಎಲ್‌ಡಿ ನೀರನ್ನು ಉಳಿಸುವ ಗುರಿ ಹಾಕಲಾಗಿದೆ.
ಬೇಸಿಗೆ ಆರಂಭವಾಗಿನಿಂದಲೂ ಬೆಂಗಳೂರಿನಲ್ಲಿ ಪ್ರತಿದಿನ 500 ಎಂಎಲ್‌ಡಿ ನೀರಿನ ಕೊರತೆ ಇದೆ. ಹೀಗಾಗಿ ದೊಡ್ಡ ಗ್ರಾಹಕರ ನೀರಿನ ಬಳಕೆಯನ್ನು ಅಲ್ಪ ಪ್ರಮಾಣದಲ್ಲಿ ಕಡಿತ ಮಾಡುವ ನಿರ್ಧಾರ ಕೈಗೊಂಡಿದೆ. ದೊಡ್ಡ ಗ್ರಾಹಕರನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಬೃಹತ್ ಬಳಕೆದಾರರು (ದಿನಕ್ಕೆ 2 ಕೋಟಿ ಲೀಟರ್‌ಗಿಂತ ಹೆಚ್ಚು ನೀರು ಬಳಸುವವರು), ದೊಡ್ಡ ಗ್ರಾಹಕರು (ದಿನಕ್ಕೆ 40 ಲಕ್ಷದಿಂದ 2 ಕೋಟಿ ಲೀಟರ್ ನೀರು ಬಳಸುವವರು) ಹಾಗೂ ದಿನಕ್ಕೆ 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಸುವ ಗ್ರಾಹಕರು. ಈ ಮೂರು ವರ್ಗದವರು ದಿನಕ್ಕೆ 525 ಮಿಲಿಯನ್ ಎಂ.ಎಲ್.ಡಿ ಬಳಸುತ್ತಾರೆ.
ಈಗ ನೀರಿನ ಕಡಿತವನ್ನು ಬೃಹತ್ ಪ್ರಮಾಣದ ಬಳಕೆದಾರರಿಗೆ ವಿಸ್ತರಿಸಲಾಗುತ್ತಿದೆ. ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳ ಕಾಂಪ್ಲೆಕ್ಸ್‌ಗಳು, ಕೈಗಾರಿಕೆಗಳಿಗೆ ನೀರಿನ ಕಡಿತವಾಗಲಿದೆ. ಇಂತಹ ಸುಮಾರು 20 ಸಾವಿರ ಗ್ರಾಹಕರು ಬೆಂಗಳೂರಿನಲ್ಲಿದ್ದಾರೆ. ದಿನಕ್ಕೆ 40 ಲಕ್ಷದಿಂದ 2 ಕೋಟಿ ಲೀಟರ್‌ಗಳ ನಡುವಿನ ಬಳಕೆದಾರರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗುತ್ತಿದೆ. ಏಪ್ರಿಲ್ 4 ರಂದು 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಸುವ ಗ್ರಾಹಕರೊಂದಿಗೆ ಮಾತುಕತೆ ನಡೆಸಲಾಗಿದೆ. ಮೊದಲ ಹಂತವಾಗಿ ಈ ತಿಂಗಳಿನಲ್ಲಿ ಶೇಕಡಾ 10ರಷ್ಟು ದೊಡ್ಡ ಗ್ರಾಹಕರಿಗೆ ನೀರಿನ ಪೂರೈಕೆಯನ್ನು ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರತಿನಿತ್ಯ ಸುಮಾರು 50 ಎಂಎಲ್‌ಡಿ ನೀರನ್ನು ಉಳಿಸುವ ಗುರಿ ಇದೆ. ಮೇ ತಿಂಗಳಲ್ಲಿ ನೀರಿನ ಪರಿಸ್ಥಿತಿಯನ್ನು ನೋಡಿಕೊಂಡು ಎರಡನೇ ಹಂತಕ್ಕೆ ಹೋಗಲಿದ್ದೇವೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಇದನ್ನೂ ಓದಿ:ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವ ಪಿಜಿಗಳ ವಿರುದ್ಧ ಕ್ರಮ: ಜಲಮಂಡಳಿ ಅಧ್ಯಕ್ಷ - Bengaluru Water Board