ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​ಗೆ ಕ್ಷಣಗಣನೆ: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಬೆಳಗಾವಿ ಜನ: ಉದ್ಯಮಿಗಳು ಹೇಳಿದ್ದೇನು..? - ಬೆಳಗಾವಿ ಜನ ನಿರೀಕ್ಷೆ

ನಾಳೆ ಕೇಂದ್ರ ಬಜೆಟ್​ ಮಂಡನೆಯಾಗಲಿದ್ದು, ಬೆಳಗಾವಿಯಿಂದ ಕೇಂದ್ರ ವಿತ್ತ ಸಚಿವರಿಗೆ 7 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ರವಾನಿಸಲಾಗಿದೆ.

ಕೇಂದ್ರ ಬಜೆಟ್​ ಬಗ್ಗೆ ಬೆಳಗಾವಿ ಉದ್ಯಮಿಗಳ ಹೇಳಿಕೆ
ಕೇಂದ್ರ ಬಜೆಟ್​ ಬಗ್ಗೆ ಬೆಳಗಾವಿ ಉದ್ಯಮಿಗಳ ಹೇಳಿಕೆ

By ETV Bharat Karnataka Team

Published : Jan 31, 2024, 8:17 PM IST

Updated : Jan 31, 2024, 11:07 PM IST

ಉದ್ಯಮಿಗಳ ಹೇಳಿಕೆ

ಬೆಳಗಾವಿ: ಫೆ.1ರಂದು ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಬೆಳಗಾವಿ ಉದ್ಯಮಿಗಳು ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೈಗಾರಿಕೆ, ನೀರಾವರಿ, ರೈಲ್ವೆ ಯೋಜನೆಗಳು ಈ ಬಾರಿಯಾದರೂ ಈಡೇರುವ ವಿಶ್ವಾಸದಲ್ಲಿ ಈ ಭಾಗದ ಜನ ಇದ್ದಾರೆ.

ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದ್ದು, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇನ್ನು ಕೈಗಾರಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿವೆ. ಆದರೆ, ಅವುಗಳಿಗೆ ಅಂದುಕೊಂಡಷ್ಟು ಸರ್ಕಾರದಿಂದ ಪ್ರೋತ್ಸಾಹ ಸಿಗದಿರುವುದು ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಹಾಗಾಗಿ, ಈ ಬಾರಿಯ ಬಜೆಟ್​ನಲ್ಲಾದ್ರೂ ತಮ್ಮ‌ ಬೇಡಿಕೆ ಈಡೇರಿಸುವಂತೆ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ 7 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರವಾನಿಸಲಾಗಿದೆ. ದೇಸೂರು ಟೆಕ್​ಪಾರ್ಕ್ ಆರಂಭಿಸಬೇಕು. ಬಾಹ್ಯಾಕಾಶ ಯೋಜನೆಗಳಿಗೆ ಬಿಡಿಭಾಗಗಳನ್ನು ಪೂರೈಸುವ ಅನೇಕ ಕೈಗಾರಿಕೆಗಳು ಬೆಳಗಾವಿ ಜಿಲ್ಲೆಯಲ್ಲಿದ್ದು, ಅವುಗಳಿಗೆ ಹೆಚ್ಚಿನ‌ ಪ್ರೋತ್ಸಾಹ ನೀಡಬೇಕು ಎಂಬ ಬೇಡಿಕೆ ಇದೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ ಜವಳಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಭಾರತ ದೇಶದ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಅಲ್ಲದೇ ಜಿಡಿಪಿಯಲ್ಲಿ ಶೇ.40ರಿಂದ 50ರಷ್ಟು ಕಾಣಿಕೆ ನೀಡುತ್ತಿದೆ. ಹಾಗಾಗಿ ಟೆಕ್ನಾಲಜಿ ಅಪ್ ಗ್ರೆಡೇಶನ್ ಮಾಡಲು ಮೊದಲಿನಂತೆ ಸಬ್ಸಿಡಿ ನೀಡಬೇಕು.‌

ಹೂಡಿಕೆ ಆಧಾರದ ಮೇಲೆ ಸಬ್ಸಿಡಿ ಹೆಚ್ಚಳ ಮಾಡಬೇಕು. ಅದೇ ರೀತಿ ಇನ್​ಕಮ್ ಟ್ಯಾಕ್ಸ್ ಸ್ಲಾಬ್ ಸಬ್ಸಿಡಿ ಕೂಡ ಹೆಚ್ಚಿಸಬೇಕು. ಇನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಕೌಶಲ್ಯ ಭರಿತರ ಸಂಖ್ಯೆ ಹೆಚ್ಚಿದ್ದು, ಸ್ಟಾರ್ಟ್ ಅಪ್ ಮತ್ತು ಎಂಎಸ್ಎಂಎಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದರೆ ಹೊರ ದೇಶಗಳ ಜೊತೆ‌ ನಾವು ಕೂಡ ಪೈಪೋಟಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಚನ್ನಬಸಪ್ಪ ಹೊಂಡದಕಟ್ಟಿ ಮಾತನಾಡಿ, ಜಿಎಸ್​ಟಿ ಜಾರಿಗೆ ಬಂದು ಇಷ್ಟು ವರ್ಷವಾದರೂ ಅದರಲ್ಲಿ ಇನ್ನೂ ಬಹಳಷ್ಟು ಸಮಸ್ಯೆಗಳಿವೆ. ಜಿಎಸ್​ಟಿ ರಿಟರ್ನ್ಸ್ ಸೌಲಭ್ಯ ಹೇಗೆ ಪಡೆಯಬೇಕು ಎಂಬ ಕುರಿತು ಮಾಹಿತಿಯೇ ಇಲ್ಲ. ಹಾಗಾಗಿ, ಆ ಬಗ್ಗೆ ಗೊಂದಲ ಬಗೆಹರಿಸಬೇಕು. ಇನ್ನು ಫೌಂಡ್ರಿಗಳಿಗೆ ಕಚ್ಛಾ ವಸ್ತುಗಳ ಪೂರೈಕೆ ಸರಿಯಾಗಿ ಆಗಬೇಕು. ಬೇರೆ ರಾಜ್ಯಗಳಲ್ಲಿ ಕೈಗಾರಿಕೆ ಆರಂಭಿಸಲು ಬಹಳಷ್ಟು ಸೌಲಭ್ಯಗಳನ್ನು ಅಲ್ಲಿನ ಸರ್ಕಾರ ನೀಡುತ್ತವೆ. ಆದರೆ, ಕರ್ನಾಟಕದಲ್ಲಿ ಅಷ್ಟೊಂದು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಹೇಳಿದರು.

ನನೆಗುದಿಗೆ ಬಿದ್ದಿರುವ ಬೆಳಗಾವಿ ಜಿಲ್ಲೆಯ ರೈಲ್ವೆ ಯೋಜನೆಗಳಾದ ಬೆಳಗಾವಿ - ಧಾರವಾಡ ನೇರ ರೈಲು ಮಾರ್ಗ, ಬೆಳಗಾವಿ - ಕೊಲ್ಹಾಪುರ ಹೊಸ ರೈಲ್ವೆ ಮಾರ್ಗ, ಸವದತ್ತಿ ಯಲ್ಲಮ್ಮಗುಡ್ಡ ಸೇರಿ ಜಿಲ್ಲೆಯ ಮತ್ತಿತರ ಕಡೆಗಳಲ್ಲಿ ರೈಲು ಸಂಚಾರ ವಿಸ್ತರಿಸುವ ಬೇಡಿಕೆಯಿದ್ದು, ಈ ಬಜೆಟ್​ನಲ್ಲಾದ್ರೂ ಇದು ಸಾಕಾರವಾಗಬೇಕಿದೆ. ಇನ್ನು ನೀರಾವರಿ ಯೋಜನೆಗಳಾದ ಮಹದಾಯಿ, ಕಳಸಾ ಬಂಡೂರಿ ಅನುಷ್ಠಾನ, ಆಲಮಟ್ಟಿ ಜಲಾಶಯ ಎತ್ತರಿಸುವ ಅವಶ್ಯಕತೆಯಿದೆ.

ಇದನ್ನೂ ಓದಿ:ಚುನಾವಣೆಯ ಬಳಿಕ ನಮ್ಮಿಂದಲೇ ಪೂರ್ಣ ಬಜೆಟ್ ಮಂಡನೆ: ಪ್ರಧಾನಿ ಮೋದಿ

Last Updated : Jan 31, 2024, 11:07 PM IST

ABOUT THE AUTHOR

...view details