ಹುಬ್ಬಳ್ಳಿ:ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚೆನ್ನಮ್ಮ ವೃತ್ತದ ಬಳಿಯ ಹಳೇ ಬಸ್ ನಿಲ್ದಾಣ ಭಾನುವಾರ ಉದ್ಘಾಟನೆಯಾಗಲಿದೆ. ಈ ಬಸ್ ನಿಲ್ದಾಣ ಪ್ರಯಾಣಿರು, ವ್ಯಾಪಾರಿಗಳು ಹಾಗೂ ಆಟೋ ಚಾಲಕರ ಜೀವನದ ಜೊತೆ ಅವಿನಾಭಾವ ಸಂಬಂಧ ಹೊಂದಿದೆ. ಹಳೇ ಬಸ್ ನಿಲ್ದಾಣ ಇದೀಗ ಹೊಸ ರೂಪ ಪಡೆದುಕೊಂಡಿದ್ದಕ್ಕೆ ಪ್ರಯಾಣಿಕರು ಹಾಗೂ ವ್ಯಾಪಾರಿಗಳು 'ಈಟಿವಿ ಭಾರತ' ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಹಣ್ಣಿನ ವ್ಯಾಪಾರಿ ನಾಗರಾಜ್ ಪ್ರತಿಕ್ರಿಯಿಸಿ, "ಹಳೇ ಬಸ್ ನಿಲ್ದಾಣವನ್ನು ಅದ್ಭುತವಾಗಿ ಕಟ್ಟಿದ್ದಕ್ಕೆ ತುಂಬ ಖುಷಿ ಇದೆ. ಆದರೆ ನಾವು ಅಜ್ಜನ ಕಾಲದಿಂದಲೂ ಇದೇ ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಈಗ ಸರಿಯಾದ ಜಾಗ ನಮಗೆ ಗುರುತಿಸಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಇಲ್ಲೇ ವ್ಯಾಪಾರ ನಡೆಸಿಕೊಂಡು ಹೋಗಲು ವ್ಯವಸ್ಥೆ ಮಾಡಿಕೊಡಬೇಕು" ಎಂದು ಮನವಿ ಮಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪ್ರತಿಕ್ರಿಯಿಸಿ, "ಈ ಬಸ್ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಆಟೋ ಚಾಲಕರು ಇದೇ ಬಸ್ ನಿಲ್ದಾಣದಿಂದ ಜೀವನ ಕಟ್ಟಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ನೂರಾರು ಆಟೋ ಚಾಲಕರು ಇದೇ ಬಸ್ ನಿಲ್ದಾಣ ನೆಚ್ಚಿಕೊಂಡಿದ್ದರು. ಆದರೆ ನಮಗೆ ಪ್ರತ್ಯೇಕವಾದ ವ್ಯವಸ್ಥೆ ಇಲ್ಲ. ಸಾವಿರಾರು ಪ್ರಯಾಣಿಕರು ನಿತ್ಯ ಬರುತ್ತಾರೆ. ಇದು ಹಿಂದೆ ಅಂತರ್ ಜಿಲ್ಲಾ ಬಸ್ ನಿಲ್ದಾಣವಾಗಿತ್ತು. ನಗರ ಸಾರಿಗೆ ಮಾಡಿದ್ದಾರೆ. ಹೀಗಾಗಿ ಅಂತರ್ ಜಿಲ್ಲಾ ಬಸ್ ನಿಲುಗಡೆ ಮಾಡಬೇಕು. ಆಟೋ ನಿಲ್ದಾಣಕ್ಕೂ ಅವಕಾಶ ನೀಡಬೇಕು" ಎಂದು ಮನವಿ ಮಾಡಿದರು.
ವ್ಯಾಪಾರಿ ಇಕ್ಬಾಲ್ ಪ್ರತಿಕ್ರಿಯಿಸಿ, "ಹಳೆ ಬಾಸ್ ನಿಲ್ದಾಣಕ್ಕಿಂತಲೂ ಇದು ಚನ್ನಾಗಿದೆ. ಸ್ಮಾರ್ಟ್ ಸಿಟಿಯಿಂದ ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ಹಳೇ ಬಸ್ ನಿಲ್ದಾಣಕ್ಕೆ ಹೊಸ ಕಳೆ ಬಂದಿದೆ. ಹಳೇ ಬಸ್ ನಿಲ್ದಾಣ ಹುಬ್ಬಳ್ಳಿಗೆ ಒಂದು ನಿಶಾನ್ ಆಗಿದೆ" ಎಂದರು.