ಹಾವೇರಿ:ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಮೇವುಂಡಿ ಗ್ರಾಮದ ಬಳಿ ಇಂದು ನಡೆಯಿತು. ಬಸ್‌ನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏನಾಯ್ತು?: ಸಾರಿಗೆ ಬಸ್ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಿಂದ ರಾಣೆಬೆನ್ನೂರು ಕಡೆ ಸಂಚರಿಸುತ್ತಿತ್ತು. ಬೆಳವಿಗಿ ಗ್ರಾಮದ ಸಮೀಪ ಬರುತ್ತಿದ್ದಂತೆ ಬೈಕ್ ಸವಾರ ಬಸ್ಗೆ ಅಡ್ಡ ಬಂದಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗದಗ ವಿಭಾಗದ ಶಿರಹಟ್ಟಿ ಡಿಪೋಗೆ ಸೇರಿದ ಬಸ್ ಇದಾಗಿದೆ. ಪ್ರಯಾಣಿಕರನ್ನು ಬೇರೆ ಬಸ್ಗಳ ಮೂಲಕ ರಾಣೆಬೆನ್ನೂರು ನಗರಕ್ಕೆ ಕಳುಹಿಸಿಕೊಡಲಾಗಿದೆ.
ಬಸ್ ಚಾಲಕನಿಗೆ ಮತ್ತು ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗುತ್ತಲ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಪಘಾತದ ಕುರಿತು ಮಾಹಿತಿ ಪಡೆದರು. ಹೆಸ್ಕಾಂ ಅಧಿಕಾರಿಗಳು ಮುರಿದುಬಿದ್ದ ವಿದ್ಯುತ್ ಕಂಬ ಸಂಪರ್ಕ ತಪ್ಪಿಸಿ ಬೇರೆ ಮಾರ್ಗದ ಮೂಲಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - BUS ACCIDENT