ರಾಯಚೂರು:ಮಗಳ ಸಾವಿನ ಬಗ್ಗೆ ತಂದೆಗೆ ಸಂಶಯ ಬಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಹೂತಿಟ್ಟ ಶವವನ್ನು ಬುಧವಾರ ಸ್ಥಳೀಯ ತಹಶೀಲ್ದಾರ್ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಹೊರ ತೆಗೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೂ ರವಾನಿಸಲಾಯಿತು.
ಘಟನೆ ಹಿನ್ನೆಲೆ: ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ನಿವಾಸಿ ಶಿವರಾಜ ಅರೇರ್ ಎಂಬುವರ ಪುತ್ರಿ ರೇಣುಕಾ ಎಂಬುವರು 2023 ಸೆ. 27 ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರ ಸಹ ನಡೆಸಲಾಗಿತ್ತು. ಆದರೆ, ತನ್ನ ಮಗಳ ಸಾವು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿ ಶಿವರಾಜ ಅರೇರ್ 2024 ಮಾ. 2 ರಂದು ಗಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಶವ ಪರೀಕ್ಷೆ ನಡೆಸಿ, ಮಾಹಿತಿ ನೀಡುವಂತೆಯೂ ಕೋರಿದ್ದರು.
ಈ ದೂರಿನ ಹಿನ್ನೆಲೆ ಕಳೆದ 6 ತಿಂಗಳ ಹಿಂದೆಯೇ ಹೂತಿಟ್ಟ ಶವವನ್ನು ಇಂದು ತಾಲೂಕು ದಂಡಾಧಿಕಾರಿ ಚನ್ನಮಲ್ಲಪ್ಪ ಘಂಟಿ ನೇತೃತ್ವದಲ್ಲಿ ಹೊರತೆಗೆದು ಶವದ ಮೂಳೆಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿದೆ. ದೂರುದಾರರ ಎದುರೇ ವೈದ್ಯರ ತಂಡದ ನೇತೃತ್ವದಲ್ಲಿ ಪೌರ ಕಾರ್ಮಿಕರ ಸಹಾಯದೊಂದಿಗೆ ಮಹಿಳೆಯ ಶವ ಹೊರತೆಗೆಯಲಾಯಿತು. ಶವದ ಅಂಗಾಂಗಳನ್ನು ಹೊರ ತೆಗೆದ ಬಳಿಕ ವೈದ್ಯರ ತಂಡದ ನೇತೃತ್ವದಲ್ಲಿ ವಿಧಿ ವಿಜ್ಞಾನ ಪರೀಕ್ಷೆಗೂ ಕಳುಹಿಸಲಾಯಿತು. ವರದಿ ಬಂದ ನಂತರವೇ ಸಾವಿನ ಕುರಿತು ಸತ್ಯಾಸತ್ಯತೆ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ದೂರುದಾರ ಶಿವರಾಜ ಅರೇರ್, ಪಿಎಸ್ಐ ಮಂಜುನಾಥ, ಎಎಸ್ಐ ಶಾಲಂಸಾಬ್, ಗ್ರಾ.ಪಂ ಕಾರ್ಯದರ್ಶಿ ಗುಂಡಪ್ಪ, ಗ್ರಾಮ ಲೆಕ್ಕಾಧಿಕಾರಿ ಭೀಮರಾವ್ ಇದ್ದರು. ಇನ್ನು ರೇಣುಕಾಳನ್ನು ಗಬ್ಬೂರು ಗ್ರಾಮದ ದಾಮೋದರ್ ಎಂಬ ಯುವಕನಿಗೆ ಕಳೆದ ಎರಡೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಅವರಿಗೆ ಒಂದೂವರೆ ವರ್ಷದ ಗಂಡು ಮಗು ಜನಿಸಿದೆ.
ಇದನ್ನೂ ಓದಿ:ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ, ಆತ್ಮಹತ್ಯೆ ಶಂಕೆ