ಕರ್ನಾಟಕ

karnataka

ETV Bharat / state

ಪವರ್‌ಸ್ಟಾರ್, ಪೈಲ್ವಾನ್‌, ಇಮ್ಮಡಿ ಪುಲಿಕೇಶಿ! ಸೊರಬದಲ್ಲಿ ಹೋರಿ ಹಬ್ಬ; ಗಮನ ಸೆಳೆದ ಹೋರಿಗಳ ಹೆಸರುಗಳು

ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನಪದ ಕ್ರೀಡೆಯಾದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಇಂದು ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ನಡೆಯಿತು.

bull-running-festival-conducted-in-shivamogga
ಹೋರಿ ಹಬ್ಬ (ETV Bharat)

By ETV Bharat Karnataka Team

Published : Dec 3, 2024, 6:37 PM IST

Updated : Dec 3, 2024, 7:22 PM IST

ಶಿವಮೊಗ್ಗ:ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಇಂದು ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಅದ್ಧೂರಿಯಾಗಿ ನಡೆಯಿತು.

ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನಪದ ಕ್ರೀಡೆಯಾದ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ನೆರೆ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು.

ಹೋರಿ ಬೆದರಿಸುವ ಹಬ್ಬದಲ್ಲಿ ಭಾಗವಹಿಸಿದ ಹೋರಿಗಳು (ETV Bharat)

ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.

ಕುತೂಹಲ ಕೆರಳಿಸಿದ ಹೋರಿಗಳ ಹೆಸರುಗಳು!: ಅಖಾಡದಲ್ಲಿ ಹಂಸಭಾವಿಯ ಕರ್ನಾಟಕ ನಂದಿ, ಹರಗಿ ವಾರಸ್ದಾರ ಅಕ್ಕಿಆಲೂರಿನ ಹೈಸ್ಪೀಡ್ ಪೈಲ್ವಾನ್, ಸಮನವಳ್ಳಿ ಹಠವಾದಿ, ಕುಬಟೂರು ರಾಜಹಂಸ, ಮಲ್ಲಿಗೇನಳ್ಳಿ ಶ್ರೀನಂದಿ, ಬಾಚಿಯ ಹಿಂದೂ ಸಾಮ್ರಾಟ, ಇಜಾರಿಲಕಮಾಪುರದ ಕೋಟಿಗೊಬ್ಬ, ನರಸಾಪುರ ಕಿಂಗ್, ಇಮ್ಮಡಿ ಪುಲಿಕೇಶಿ, ಆನವಟ್ಟಿ ಮಲೆನಾಡ ದಂಗೆ, ಹಿರೇಮಾಗಡಿ ಮಾಣಿಕ್ಯ, ಇಜಾರಿಲಕಮಾಪುರದ ಭರ್ಜರಿ, ಚಿಕ್ಕಮಾಕೊಪ್ಪದ ದೊಡ್ಮನೆ ಚಿನ್ನ, ಕೆಡಿಎಂ ಕಿಂಗ್, ಗೆಜ್ಜೆಹಳ್ಳಿ ಎನ್‍ಕೌಂಟರ್, ಆನವಟ್ಟಿ ಯುವರತ್ನ, ಮರೂರು ತಾರಕಾಸುರ, ಹಾವೇರಿಯ ನಾಯಕನ ಅಧಿಕಾರ, ಸೊರಬದ ರಾವಣ, ಚಿಕ್ಕಾವಲಿ ನಾಗ, ಸಾರೆಕೊಪ್ಪದ ಸುನಾಮಿ, ಕುಪ್ಪಗಡ್ಡೆ ಗ್ರಾಮದ ಹೋರಿಗಳಾದ ಪವರ್ ಸ್ಟಾರ್, ಯಜಮಾನ, ಸೂಪರ್ ಸ್ಟಾರ್, ಕಾಲಭೈರವ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನರು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿತ್ತು.

ವಿಶೇಷವಾಗಿ ಹಂಸಭಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು 140ನೇ ಬಾರಿ ಅಖಾಡದಲ್ಲಿ ಓಟ ನಡೆಸಿದ್ದು ವಿಶೇಷವಾಗಿತ್ತು. ಈ ಹೋರಿ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಖಾಡದಲ್ಲಿ ಶರವೇಗದಲ್ಲಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು.

ಪೊಲೀಸ್ ಬಂದೋಬಸ್ತ್ ವ್ಯವಸ್ಥೆ: ಅಖಾಡದ ಎರಡೂ ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೇ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಇದನ್ನೂ ಓದಿ:ಶಿವಮೊಗ್ಗ ಸ್ಪೆಷಲ್​​: ಅರೆ‌ ಮಲೆನಾಡಿನಲ್ಲಿ ಕ್ರೇಜ್ ಹುಟ್ಟಿಸುವ ಹೋರಿ ಬೆದರಿಸುವ ಹಬ್ಬ; ಹೀಗಿದೆ ಇತಿಹಾಸ!

Last Updated : Dec 3, 2024, 7:22 PM IST

ABOUT THE AUTHOR

...view details