ಕರ್ನಾಟಕ

karnataka

ETV Bharat / state

ಸಿಬ್ಬಂದಿಗೆ ಸಂಬಳ, ಸಂಸ್ಥೆಯ ನಿರ್ವಹಣೆಗೆ ಭೂಮಿ ಮಾರಾಟಕ್ಕೆ ಮುಂದಾದ ಬಿಎಸ್​ಎನ್ಎಲ್ - BSNL - BSNL

ಮಂಗಳೂರಿನ ಕದ್ರಿ ಹಾಗೂ ಮೈಸೂರಿನಲ್ಲಿರುವ 14 ಆಸ್ತಿಗಳನ್ನು ಬಿಎಸ್​ಎನ್‌ಎಲ್ ಸಂಸ್ಥೆ ಮಾರಾಟ ಮಾಡಲು ನಿರ್ಧರಿಸಿದೆ.

BSNL Organization
ಬಿಎಸ್​ಎನ್ಎಲ್ (ETV Bharat)

By ETV Bharat Karnataka Team

Published : Jun 27, 2024, 9:53 PM IST

ಮಂಗಳೂರು(ದಕ್ಷಿಣ ಕನ್ನಡ):ಸಿಬ್ಬಂದಿಗೆ ಸಂಬಳ, ಸಂಸ್ಥೆಯ ನಿರ್ವಹಣೆ ಮತ್ತು 4ಜಿ ಅಪ್​ಗ್ರೇಡ್‌ಗಾಗಿ ಬಿಎಸ್​ಎನ್ಎಲ್ ಸಂಸ್ಥೆಯು ಮಂಗಳೂರಿನ ಕದ್ರಿಯಲ್ಲಿರುವ ಭೂಮಿ ಹಾಗೂ ಮೈಸೂರಿನಲ್ಲಿರುವ 14 ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಬಿಎಸ್ಎನ್ಎಲ್ ಕರ್ನಾಟಕ ಸರ್ಕಲ್ ಚೀಫ್ ಜನರಲ್ ಮ್ಯಾನೇಜರ್ ಉಜ್ವಲ್ ಗುಲ್ಹಾನೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬ್ಬಂದಿಗೆ ವೇತನ ನೀಡುವುದು, ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಮತ್ತು 4 ಜಿ ಅಪ್​ಗ್ರೇಡ್​ಗಾಗಿ ಹಣಕಾಸಿನ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಎಸ್ಎನ್ಎಲ್ ಉಪಯೋಗಿಸದೆ ಇರುವ ಭೂಮಿಯನ್ನು ಮಾರಲು ನಿರ್ಧರಿಸಿದೆ ಎಂದರು.

ನಗರದ ಕದ್ರಿ ಹಿಲ್ಸ್ ಪಾರ್ಕ್ ರೋಡ್​ನ ಲ್ಯಾಂಡ್ ಪಾರ್ಸೆಲ್ ಸ್ಟೋರ್ ಯಾರ್ಡ್ 2 ಎಕ್ರೆ (8094 ಚ.ಮೀ) ಭೂಮಿಯನ್ನು ಮೀಸಲು ಬೆಲೆ 39 ಕೋಟಿಗೆ ಮಾರಾಟ ಮಾಡಲು ಉದ್ದೇಶಿಸಿದೆ. ಜುಲೈ 1ಕ್ಕೆ ಬಿಡ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ಎರಡನೇ ಹಂತದಲ್ಲಿ ಎಕ್ಕೂರಿನಲ್ಲಿರುವ ಬಜಾಲ್ ಬಿಟಿಎಸ್ ಸೈಟ್​ನ 30 ಸೆಂಟ್ಸ್, ಕುಂಜತ್ತೂರಿನ ಮೈಕ್ರೋವೇವ್ ಸ್ಟಾಪ್ ಕ್ವಾಟ್ರಸ್ ಕಾಂಪೌಂಡ್​ನ 20592 ಚ. ಮೀ, ಬೋಳಾರದ ಟೆಲಿಪೋನ್ ಎಕ್ಸ್ ಚೇಂಜ್ ಕಾಂಪೌಂಡ್​ನ 13 ಸೆಂಟ್ಸ್ ಮಾರಾಟ ಮಾಡಲಾಗುವುದು ಎಂದು ಹೇಳಿದರು.

4ಜಿ ನೆಟ್​ವರ್ಕ್ ಅಪ್‌ಗ್ರೇಡ್: ಬಿಎಸ್ಎನ್​ಎಲ್ ಸ್ಟ್ಯಾಂಡ್ ಅಲೋನ್ ಮೇಕ್ ಇನ್ ಇಂಡಿಯಾ 4ಜಿ ನೆಟ್​ವರ್ಕ್ ಅನ್ನು ಹೊರತರಲಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ ಲಿಮಿಟೆಡ್ ಮೂಲಕ ಇದರ ಸರಬರಾಜು ಮತ್ತು ಸ್ಥಾಪನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ನೆಟ್​ವರ್ಕ್ ಮೂಲಕ 5ಜಿಗೆ ಅಪ್ ಗ್ರೇಡ್ ಮಾಡಬಹುದಾಗಿದೆ.

ಮಂಗಳೂರು ಕಾರ್ಯಕ್ಷೇತ್ರದಲ್ಲಿ (ದ.ಕ 412, ಉಡುಪಿ 198) ಒಟ್ಟು 610 4ಜಿ ಟವರ್​ಗಳನ್ನು ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ 161 4 ಜಿ ಟವರ್ ಇದ್ದು, ಮುಂದೆ 412 4ಜಿ ಟವರ್ ಬರಲಿದೆ. ಈಗಾಗಲೇ ಎರಡು ಜಿಲ್ಲೆಗಳಲ್ಲಿ ಸುಮಾರು 20 ಟವರ್​ಗಳನ್ನು 4 ಜಿಗಾಗಿ ಪ್ರಯೋಗ ಮಾಡಲಾಗಿದೆ.

ಬಿಎಸ್ಎನ್​ಎಲ್ ಭಾರತ ಸರ್ಕಾರದ 4ಜಿ ಸ್ಯಾಚುರೇಶನ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದರ ಮೇಲ್ವಿಚಾರಣೆಯನ್ನು ಪ್ರಧಾನಮಂತ್ರಿ ಕಾರ್ಯಾಲಯದಿಂದ ನಡೆಸಲಾಗುತ್ತಿದೆ. ಈ ಯೋಜನೆಯ ಮೊದಲ ಹಂತದಲ್ಲಿ ದ.ಕ, ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುವ ಕಾರ್ಯಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ 76 ಸ್ಥಳಗಳನ್ನು ಗುರುತಿಸಲಾಗಿದೆ.

ಇಲ್ಲಿಯವರೆಗೆ ಈ ಸ್ಥಳಗಳಲ್ಲಿ ಯಾವುದೇ ಪ್ರೈವೆಟ್ ಮೊಬೈಲ್ ಆಪರೇಟರ್​ಗಳಿಂದ ನೆಟ್​ವರ್ಕ್ ಕವರೇಜ್ ಲಭ್ಯವಿರುವುದಿಲ್ಲ. ದ.ಕ ಜಿಲ್ಲೆಯಲ್ಲಿ 43 ನಿವೇಶನಗಳ ಪೈಕಿ 40 ಕಡೆ ಟವರ್​ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ 33 ನಿವೇಶನಗಳ ಪೈಕಿ 30 ಕಡೆ ಟವರ್​ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಇ-ಹರಾಜಿನ ಮೂಲಕ ಮಾರಾಟ:ಬಿಎಸ್‌ಎನ್‌ಎಲ್‌ ಹೊಸ ತಂತ್ರಜ್ಞಾನ ಅಳವಡಿಕೆಗೆ ಬೇಕಾದ ಬಂಡವಾಳ ಸಂಗ್ರಹಕ್ಕೆ (BSNL LAND FOR SEAL) ಮೈಸೂರು ವೃತ್ತದ 14 ಆಸ್ತಿಗಳನ್ನ ಇ-ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಬಿಎಸ್‌ಎನ್‌ಎಲ್​ನ ತಾಂತ್ರಿಕ ವಿಭಾಗದ ಚೀಫ್ ಜನರಲ್‌ ಮ್ಯಾನೇಜರ್‌ ಉಜ್ವಲ್‌ ಗುಲ್ಹಾನೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಬುಧವಾರ ಸಂಜೆ ನಗರದ ಜಯಲಕ್ಷಿಪುರಂನಲ್ಲಿರುವ ಮೈಸೂರು ಟೆಲಿಕಾಂ ವೃತ್ತದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದಾದ್ಯಂತ ಬಿಎಸ್‌ಎನ್‌ಎಲ್​ಗೆ ಸೇರಿದ 15,000 ಆಸ್ತಿಗಳಿದ್ದು, ಈ ಆಸ್ತಿಗಳಲ್ಲಿ 5,000 ಖಾಲಿ ಜಾಗಗಳನ್ನ ಇ-ಹರಾಜಿನ ಮೂಲಕ ಮಾರಾಟಕ್ಕೆ ಇಡಲಾಗಿದೆ.

ಮೈಸೂರು ವೃತ್ತಕ್ಕೆ ಸೇರಿರುವ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್‌ ಗೆ ಸೇರಿದ 145 ಆಸ್ತಿಗಳಿದ್ದು, ಅದರಲ್ಲಿ 14 ಆಸ್ತಿಗಳನ್ನ ಈ 4 ಜಿಲ್ಲೆಗಳಿಂದ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬಿಎಸ್‌ಎನ್‌ಎಲ್‌ ಲ್ಯಾಂಡ್‌ ಫಾರ್‌ ಸೇಲ್: ಮೊದಲಿಗೆ ಮೈಸೂರು ನಗರದಲ್ಲಿರುವ ಕುವೆಂಪು ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ 25,785 ಚ. ಅ. ವಿಸ್ತೀರ್ಣ ಬಿಎಸ್‌ಎನ್‌ಎಲ್‌ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆ 21.11 ಕೋಟಿ ಆಗಿದೆ. ಇ ಹರಾಜಿನ ಮೂಲಕ ಆಸ್ತಕರು ಭಾಗವಹಿಸಬಹುದು ಎಂದ ಉಜ್ವಲ್‌ ಗುಲ್ಹಾನೆ ಶೀಘ್ರದಲ್ಲೇ ಮೈಸೂರಿನಲ್ಲಿರುವ ಜೆಎಸ್​ಎಸ್​ದ ಲೇ ಔಟ್‌, ಕನಕದಾಸ ನಗರದ ಮೂರನೇ ಹಂತ, ಹೊಟಗಳ್ಳಿ ಕೈಗಾರಿಕಾ ಪ್ರದೇಶದ ದೂರವಾಣಿ ವಿನಿಮಯ ಕೇಂದ್ರ, ಬನ್ನಿಮಂಟಪ ಹಾಗೂ ರಾಜೇಂದ್ರ ವಿಲಾಸ ಅರಮನೆಯ ಬಳಿಯಿರುವ ದೂರವಾಣಿ ವಿನಿಮಯ ಕೇಂದ್ರಗಳನ್ನ ಇ-ಹರಾಜಿನ ಮೂಲಕ ಮಾರಾಟ ಮಾಡಲಾಗುವುದು. ಇದರಿಂದ ಬಂದ ಹಣವನ್ನು ತಂತ್ರಜ್ಞಾನದ ಅಭಿವೃದ್ದಿಗೆ ಬಳಸಲಾಗುವುದು ಎಂದರು.

ಶೀಘ್ರವೇ 4ಜಿ ಸೇವೆ:ಬಿಎಸ್‌ಎನ್‌ಎಲ್‌ ಭಾರತ ಸರ್ಕಾರದ 4ಜಿ ಸ್ಯಾಚುರೇಷನ್‌ ಯೋಜನೆಯನ್ನ ಕೈಗೊಂಡಿದ್ದು, ಮೈಸೂರು ವೃತ್ತದ ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಹಲವು ಕಡೆ 4g ಸೇವೆ ನೀಡುವ ಟವರ್​ಗಳನ್ನ ಶೀಘ್ರವೇ ಆರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚೀಫ್‌ ಜನರಲ್‌ ಮ್ಯಾನೇಜರ್‌ ಪರಮೇಶ್ವರಿ ದಯಾಳ್‌, ಬೆಂಗಳೂರಿನ ಜಿಎಂ ದೀಪಕ್‌ ಕುಮಾರ್‌ ಶರ್ಮ ಹಾಗೂ ಇನ್ನಿತರ ಸಿಬ್ಬಂದಿ ಇದ್ದರು.

ಇದನ್ನೂ ಓದಿ:ಫೈಬರ್ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಆಗುವಂತೆ ಗ್ರಾಹಕರಿಗೆ ಬಿಎಸ್​ಎನ್​ಎಲ್ ಮನವಿ

ABOUT THE AUTHOR

...view details