ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಆಗಿದೆ. ದುರಹಂಕರಾದಿಂದ ರಜೆ ಘೋಷಿಸುವ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರು ಮಹಾನಗರ ವತಿಯಿಂದ ಬಾಣಸವಾಡಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಯಿತು. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಕಾರ್ಯಕರ್ತರು ಉಪಸ್ಥಿತರಿದ್ದು, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾದರು. ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ
ನಂತರ ಮಾತನಾಡಿದ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ಸಕಲ ಭಾರತೀಯರಿಗೆ ನಾನು ಶುಭ ಕೋರುತ್ತೇನೆ. ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಕರ ಸೇವಕರಿಗೂ ಅನಂತ ಧನ್ಯವಾದಗಳು. ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ್ ಜೋಶಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಅಯೋಧ್ಯೆ ನಿರ್ಮಾಣ ಕಾರ್ಯ ಅಚ್ಚುಕಟ್ಟಾಗಿ ಮಾಡಿದ ಉತ್ತರ ಪ್ರದೇಶ ಆಡಳಿತ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯರ ಬಹು ದಿನಗಳ ಕನಸು ನನಸು ಮಾಡಿದ ಹೆಮ್ಮೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. 15 ದಿನ ಬಿಟ್ಟು ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದರು.
ಸರ್ಕಾರದಿಂದ ಸರ್ಕಾರಿ ರಜೆ ಘೋಷಣೆ ಮಾಡದ ವಿಚಾರಕ್ಕೆ ಅಸಮಧಾನಗೊಂಡ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಆಗಿದೆ. ರಾಮ ರಾಜ್ಯದ ಕಲ್ಪನೆ ಕೂಡ ಅವರಲ್ಲಿ ಇಲ್ಲ. ದೇಶದ ಅನೇಕ ಕಡೆಗಳಲ್ಲಿ ರಾಮನ ಸ್ಮರಣೆಗಾಗಿ ರಜೆ ಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ದುರಹಂಕಾರದಿಂದ ರಜೆ ಘೋಷಿಸುವ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಮಹದೇವಪುರದಲ್ಲಿ ಸಿದ್ದರಾಮಯ್ಯ ಅವರಿಂದ ರಾಮನ ದೇವಸ್ಥಾನ ಉದ್ಘಾಟನೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದನ್ನೂ ಓದಿ: ಜನವರಿ 22 ಬರೀ ದಿನಾಂಕವಲ್ಲ- ಹೊಸಶಕೆಯ ಆರಂಭ: ಪ್ರಧಾನಿ ಮೋದಿ ಬಣ್ಣನೆ